India vs South Africa: ಎರಡನೇ ಟೆಸ್ಟ್ ಆರಂಭಕ್ಕೆ ಇದೆಯೇ ಮಳೆಯ ಕಾಟ?: ಜೋಹನ್ಸ್​​ಬರ್ಗ್​​ ವಾತಾವರಣ ಹೇಗಿದೆ?

| Updated By: Vinay Bhat

Updated on: Jan 03, 2022 | 8:21 AM

Johannesburg Weather Forecast and Pitch Report: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯಕ್ಕೆ ಸೆಂಚೂರಿಯನ್‌ನಂತೆಯೇ ಜೋಹನ್ಸ್‌ಬರ್ಗ್‌ನಲ್ಲಿಯೂ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮೊದಲನೇ ದಿನ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

India vs South Africa: ಎರಡನೇ ಟೆಸ್ಟ್ ಆರಂಭಕ್ಕೆ ಇದೆಯೇ ಮಳೆಯ ಕಾಟ?: ಜೋಹನ್ಸ್​​ಬರ್ಗ್​​ ವಾತಾವರಣ ಹೇಗಿದೆ?
india vs south africa Johannesburg Weather
Follow us on

ಸೌತ್ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ವಿಶ್ವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ (Indian Cricket Team) ಸದ್ಯ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದಿನಿಂದ ಜೋಹನ್ಸ್​​ಬರ್ಗ್​​ನ ವಂಡರರ್ಸ್‌ ಸ್ಟೇಡಿಯಂನಲ್ಲಿ (Johannesburg, Wanderers) ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಲಿದೆ. ಹರಿಣಗಳ ನಾಡಲ್ಲಿ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದ್ದು, ಈ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದರೆ ಇತಿಹಾಸ ನಿರ್ಮಾಣವಾಗಲಿದೆ. ಸೆಂಚುರಿಯನ್‌ನ ಮೊದಲ ಪಂದ್ಯವನ್ನು 113 ರನ್‌ಗಳ ಅಂತರದಿಂದ ಗೆದ್ದಿರುವ ಟೀಮ್ ಇಂಡಿಯಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ವಂಡರರ್ಸ್‌ ಸ್ಟೇಡಿಯಂ ಕೂಡ ವೇಗಿಗಳಿಗೆ ಸ್ವರ್ಗವಾಗಿದ್ದು ವಿಕೆಟ್​ಗಳ ಮಳೆ ಸುರಿಯುವುದು ಖಚಿತ. ಇದರ ಜೊತೆಗೆ ವರುಣನ ಕಾಟ ಕೂಡ ಇದೆಯೇ ಎಂಬ ಭಯ ಶುರುವಾಗಿದೆ. ಹಾಗಾದ್ರೆ ಜೋಹನ್ಸ್​​ಬರ್ಗ್​​ ವಾತಾವರಣ (Johannesburg Weather) ಹೇಗಿದೆ? ಎಂಬುದನ್ನು ನೋಡೋಣ…

ಮಳೆ ಸಾಧ್ಯತೆ:

ಸೆಂಚೂರಿಯನ್‌ನಂತೆಯೇ ಜೋಹನ್ಸ್‌ಬರ್ಗ್‌ನಲ್ಲಿಯೂ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮೊದಲನೇ ದಿನ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸೋಮವಾರ ಅಪರಾಹ್ನದ ಬಳಿಕ ಸಾಧರಾಣ ಮಳೆಯಾಗಲಿದೆ. ಮಂಗಳ ವಾರ ದಿನವಿಡೀ ಗುಡುಗು ಸಹಿತ ಭಾರೀ ಮಳೆ ಆಗಲಿದ್ದು, ಸೆಂಚುರಿಯನ್‌ ಟೆಸ್ಟ್‌ ಪಂದ್ಯದಂತೆ ದ್ವಿತೀಯ ದಿನದಾಟ ವಾಶ್‌ಔಟ್‌ ಆಗಲೂಬಹುದಂತೆ. ಆದರೆ ಸೆಂಚುರಿಯನ್‌ ಪಂದ್ಯದ ಅಂತಿಮ ದಿನ ಭಾರೀ ಮಳೆ ಸುರಿ ಯಲಿದೆ ಎಂಬ ಹವಾಮಾನ ವರದಿ ಸುಳ್ಳಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ.

ಪಿಚ್ ರಿಪೋರ್ಟ್:

ವಾಂಡರರ್ಸ್ ಪಿಚ್ ಸಾಮಾನ್ಯವಾಗಿ ಬ್ಯಾಟರ್​ಗಳಿಗೆ ಹಾಗೂ ಬೌಲರ್‌ಗಳು ಇಬ್ಬರಿಗೂ ಸಹಾಯವನ್ನು ನೀಡುತ್ತದೆ. ಬ್ಯಾಟರ್​ಗಳು ಸಾಕಷ್ಟು ಏಕಾಗ್ರತೆಯ ಪ್ರದರ್ಶನ ನೀಡಿದರೆ ಇಲ್ಲಿ ರನ್‌ಗಳನ್ನು ಗಳಿಸಬಹುದು. ಅಲ್ಲದೆ ಪಿಚ್ ಉತ್ತಮ ಬೌನ್ಸ್ ಹೊಂದಿರುವ ಕಾರಣದಿಂದಾಗಿ ಯಶಸ್ಸು ಪಡೆಯುವ ಸಾಧ್ಯವಿದೆ.

ವಂಡರ್‌ ಆಫ್ ಕ್ರಿಕೆಟ್‌ ಎನಿಸಿರುವ ಜೋಹನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ ಭಾರತದ ಪಾಲಿನ ಅದೃಷ್ಟದ ತಾಣ. 1992ರಿಂದ ಇದುವರೆಗೆ ಭಾರತ ತಂಡ ವಂಡರರ್ಸ್‌ನಲ್ಲಿ 5 ಟೆಸ್ಟ್ ಆಡಿದ್ದು, ಒಂದರಲ್ಲೂ ಸೋತಿಲ್ಲ. 2 ಗೆಲುವು ದಾಖಲಿಸಿರುವ ಭಾರತ ತಂಡ, 3 ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಜೊಹಾನ್ಸ್‌ಬರ್ಗ್ ಭಾರತ ತಂಡಕ್ಕೆ ವಿದೇಶದ ತವರು ಮೈದಾನದಂತಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಆಡಿದ 42 ಟೆಸ್ಟ್‌ ಗಳಲ್ಲಿ 18 ಜಯ ಸಾಧಿಸಿದರೂ ಭಾರತವನ್ನು ಇನ್ನೂ ಸೋಲಿಸಿಲ್ಲ ಎಂಬುದೊಂದು ಅಚ್ಚರಿ. ಜೊಹಾನ್ಸ್‌ಬರ್ಗ್‌ನಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ಟೀಮ್‌ ಇಂಡಿಯಾ ಇದನ್ನು ಮುಂದುವರಿಸುತ್ತಾ ಎಂಬುದು ನೋಡಬೇಕಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್/ಹನುಮಾ ವಿಹಾರಿ, ಶಾರ್ದೂಲ್ ಠಾಕೂರ್/ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್ ಸಿರಾಜ್.

South Africa vs India: ಇಂದಿನಿಂದ ಭಾರತ-ಆಫ್ರಿಕಾ ಎರಡನೇ ಟೆಸ್ಟ್ ಆರಂಭ: ಐತಿಹಾಸಿಕ ಸಾಧನೆ ಮಾಡುತ್ತಾ ವಿರಾಟ್ ಕೊಹ್ಲಿ ಪಡೆ?

(India vs South Africa 2nd Test India Playing XI Johannesburg Weather Forecast and Pitch Report at The Wanderers Stadium)