ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿ ಇದೀಗ ಶ್ರೀಲಂಕಾವನ್ನು ಟಿ20 ಸರಣಿಯಲ್ಲೂ ವೈಟ್ವಾಷ್ ಮಾಡಿ ಸತತ ಗೆಲುವನ್ನೇ ಸಾಧಿಸುತ್ತಿರುವ ಭಾರತ (India vs Sri Lanka) ಮತ್ತೊಂದು ಮಹತ್ವದ ಪಂದ್ಯಕ್ಕೆ ತಯಾರಾಗುತ್ತಿದೆ. ಚುಟುಕು ಕದನದ ಬಳಿಕ ಪ್ರತಿಷ್ಠಿತ ಟೆಸ್ಟ್ ಸರಣಿಗೆ ರೋಹಿತ್ ಪಡೆ ಕಾತುರವಾಗಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ರಿಷಭ್ ಪಂತ್ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಅಲ್ಲದೆ ಕೊಹ್ಲಿಗೆ ಇದು 100ನೇ ಟೆಸ್ಟ್ ಪಂದ್ಯ ಎಂಬುದು ವಿಶೇಷ. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಅವರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಳಿಯಲಿದೆ. ಕ್ಯಾಪ್ಟನ್ ರೋಹಿತ್ ಶರ್ಮಾಗೂ (Rohit Sharma) ಇದು ಟೆಸ್ಟ್‌ನಲ್ಲಿ ಅಗ್ನಿಪರೀಕ್ಷೆಯಾಗಿದೆ. ಹೀಗೆ ಸಾಕಷ್ಟು ವಿಚಾರಗಳಿಂದ ರೋಚಕತೆ ಸೃಷ್ಟಿಸಿರುವ ಮೊದಲ ಟೆಸ್ಟ್ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?, ಎಷ್ಟು ಗಂಟೆಗೆ ಆರಂಭ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4 (ಶುಕ್ರವಾರ) ರಂದು ಆರಂಭವಾಗಲಿದೆ.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಆಯೋಜನೆ ಮಾಡಲಾಗಿದೆ.
ಬೆಳಗ್ಗೆ 9:30ಕ್ಕೆ ಮ್ಯಾಚ್ ಶುರುವಾಗಲಿದ್ದು, ಸರಿಯಾಗಿ 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಕಾಣಲಿದೆ. ಆನ್ಲೈನ್ನಲ್ಲಾದರೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಲೈವ್ ವೀಕ್ಷಿಸಬಹುದು.
ರಹಾನೆ-ಪೂಜಾರ ಸ್ಥಾನದಲ್ಲಿ ಯಾರು?:
ಭಾರತ ಟೆಸ್ಟ್ ತಂಡದಲ್ಲಿ ರಹಾನೆ-ಪೂಜಾರ ಸ್ಥಾನ ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮೂರನೇ ಕ್ರಮಾಂಕದಲ್ಲಿ ಪೂಜಾರ ಮತ್ತು ಐದನೇ ಕ್ರಮಾಂಕದಲ್ಲಿ ರಹಾನೆ ಬದಲಿಗೆ ಈ ಸ್ಥಾನಕ್ಕೆ ಮೂವರು ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಆಲ್ರೌಂಡ್ ಹನುಮ ವಿಹಾರಿ ನಡುವೆ ಕಠಿಣ ಪೈಪೋಟಿ ಶುರುವಾಗಿದೆ. ಪೂಜಾರ ಅವರ ಮೂರನೇ ಸ್ಥಾನದಲ್ಲಿ ಗಿಲ್ ಆಡುವುದು ಬಹುತೇಕ ಖಚಿತವಾಗಿದೆ. ರಹಾನೆಯ 5ನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಅವರ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಬಂದಿದ್ದ ಶ್ರೇಯಸ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿ ಚೊಚ್ಚಲ ಟೆಸ್ಟ್ನಲ್ಲೇ ಸಂಚಲನ ಸೃಷ್ಟಿಸಿದ್ದರು. ಅಲ್ಲದೆ ಅಯ್ಯರ್ ಟಿ20ಯ ಮೂರೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಬೊಂಬಾಟ್ ಫಾರ್ಮ್ನಲ್ಲಿದ್ದಾರೆ. ಮತ್ತೊಂದೆಡೆ ವಿಹಾರಿ ಅವರು ತಮ್ಮ ಪ್ರತಿಭೆಯನ್ನು ಈಗಾಗಲೇ ತೋರಿಸಿದ್ದಾರೆ. ರಣಜಿಯಲ್ಲೂ ಉತ್ತಮ ಆಟವಾಡಿದ್ದಾರೆ. ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ಕೆ.ಎಸ್ ಭರತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಜಯಂತ್ ಯಾದವ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಸೌರಭ್ ಕುಮಾರ್ , ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ (ಉಪನಾಯಕ).
ಶ್ರೀಲಂಕಾ ಟೆಸ್ಟ್ ತಂಡ: ದಿಮುತ್ ಕರುಣಾರತ್ನೆ (ನಾಯಕ), ಪತುಮ್ ನಿಸಂಕ, ಲಾಹಿರು ತಿರಿಮನ್ನೆ, ಧನಂಜಯ ಡಿ’ಸಿಲ್ವಾ (ಉಪನಾಯಕ), ಕುಶಲ್ ಮೆಂಡಿಸ್ (ಫಿಟ್ನೆಸ್ ಖಾತ್ರಿಯಾಗಬೇಕಿದೆ), ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂದಿಮಾಲ್, ಚರಿತ್ ಅಸಲಂಕ, ನಿರೋಷನ್ ಡಿಕ್ವೆಲ್ಲ, ಚಮಿಕ ಕರುಣಾರತ್ನೆ, ರಮೇಶ್ ಮೆಂಡಿಸ್, ಲಾಹಿರು ಕುಮಾರ, ಸುರಂಗ ಲಕ್ಮಲ್, ದುಷ್ಮಾಂತ ಚಾಮೀರ, ವಿಶ್ವ ಫರ್ನಾಂಡೊ, ಜೆಫ್ರಿ ವ್ಯಾಂಡರ್ಸೆ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ.
IND vs SL Test: ರೋಚಕತೆ ಸೃಷ್ಟಿಸಿರುವ ಭಾರತ- ಶ್ರೀಲಂಕಾ ಮೊದಲ ಟೆಸ್ಟ್ಗೆ ಒಂದೇ ದಿನ ಬಾಕಿ
Published On - 8:42 am, Thu, 3 March 22