ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 3 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲಗೊಂಡಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ವಶಪಡಿಸಿಕೊಳ್ಳಲಿದೆ.
ಮೊದಲ ಪಂದ್ಯದಲ್ಲಿ 38 ರನ್ಗಳ ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದ್ದ ಭಾರತ, 2ನೇ ಪಂದ್ಯದಲ್ಲಿ ವಿರೋಚಿತ ಹೋರಾಟದೊಂದಿಗೆ 4 ವಿಕೆಟ್ಗಳ ಸೋಲನುಭವಿಸಿತು. ಇನ್ನು ಟೀಮ್ ಇಂಡಿಯಾ ಒಂದು ಬದಲಾವಣೆ ಮಾಡಲಾಗಿದ್ದು, ಗಾಯಗೊಂಡಿರುವ ನವದೀಪ್ ಸೈನಿ ಸ್ಥಾನದಲ್ಲಿ ಯುವ ವೇಗಿ ಸಂದೀಪ್ ವಾರಿಯರ್ ಪದಾರ್ಪಣೆ ಮಾಡಲಿದ್ದಾರೆ.
ಪ್ರಮುಖ ಆಟಗಾರ ಅಲಭ್ಯತೆಯ ನಡುವೆ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರು ಸ್ಥಾನ ಪಡೆದಿದ್ದು, ಅದರಂತೆ ಆರಂಭಿಕರಾಗಿ ಶಿಖರ್ ಧವನ್ ಹಾಗೂ ರುತುರಾಜ್ ಗಾಯಕ್ವಾಡ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಇಂದು ಕೂಡ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಆಡಲಿದ್ದು, ಐದನೇ ಕ್ರಮಾಂಕದಲ್ಲಿ ನಿತೀಶ್ ರಾಣಾ ಬ್ಯಾಟ್ ಬೀಸಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ತಂಡದಲ್ಲಿ ಚೇತನ್ ಸಕರಿಯಾ, ಸಂದೀಪ್ ವಾರಿಯರ್ ಇದ್ದಾರೆ. ಹಾಗೆಯೇ ಇಂದು ಕೂಡ ಟೀಮ್ ಇಂಡಿಯಾ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುತ್ತಿರುವುದು ಮತ್ತೊಂದು ವಿಶೇಷ. ಅದರಂತೆ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ರಾಹುಲ್ ಚಹರ್ ಸ್ಪಿನ್ ಮೋಡಿ ಮಾಡಲಿದ್ದಾರೆ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ (Team India Playing 11) ಹೀಗಿದೆ:
ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಸಂದೀಪ್ ವಾರಿಯರ್, ಚೇತನ್ ಸಕರಿಯಾ, ರಾಹುಲ್ ಚಹರ್
ಟೀಮ್ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿಅವರ ಜೊತೆ ನೇರ ಸಂಪರ್ಕ ಹೊಂದಿದ್ದ ಆಟಗಾರರನ್ನು ಐಸೋಲೇಷನ್ಗೆ ಒಳಪಡಿಸಲಾಗಿದೆ. ಹೀಗಾಗಿ 2ನೇ ಹಾಗೂ 3ನೇ ಪಂದ್ಯದಲ್ಲಿ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಮನೀಶ್ ಪಾಂಡೆ ಮತ್ತು ಇಶಾನ್ ಕಿಶನ್ ಕಣಕ್ಕಿಳಿಯುತ್ತಿಲ್ಲ.
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(India vs Sri Lanka 3rd T20 Playing 11)
Published On - 7:36 pm, Thu, 29 July 21