ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿರುವ ಭಾರತ (India vs West Indies) ಇಂದು ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಹಾರ್ದಿಕ್ (Hardik Pandya) ಪಡೆಗೆ ಬಹುಮುಖ್ಯವಾಗಿದೆ. ಮೊದಲ ಪಂದ್ಯದಲ್ಲಿ ಭಾರತೀಯರ ಬ್ಯಾಟಿಂಗ್ – ಬೌಲಿಂಗ್ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಯುವ ಪಡೆ ಎಡವಿತ್ತು, ಇದನ್ನು ನಾಯಕ ಹಾರ್ದಿಕ್ ಪಾಂಡ್ಯ ಕೂಡ ಹೇಳಿದ್ದರು. ಇದೀಗ ಆ ತಪ್ಪುಗಳನ್ನು ತಿದ್ದಿ ಬೌನ್ಸ್ ಬ್ಯಾಕ್ ಮಾಡಬೇಕಿದೆ. ಇದಕ್ಕಾಗಿ ಟೀಮ್ ಇಂಡಿಯಾದಲ್ಲಿ (Team India) ಕೆಲ ಬದಲಾವಣೆ ಮಾಡಬಹುದು.
ಟೀಮ್ ಇಂಡಿಯಾ ಪರ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸುತ್ತಿಲ್ಲ. ಇವರ ಕಡೆಯಿಂದ ಒಂದೊಳ್ಳೆ ಆಟ ಬರಬೇಕಿದೆ. ಸತತವಾಗಿ ಕಳಪೆ ಪ್ರದರ್ಶನ ತೋರುತ್ತಿರುವ ಸೂರ್ಯಕುಮಾರ್ ಯಾದವ್ಗೆ ಇದೊಂದು ಅಗ್ನಿಪರೀಕ್ಷೆಯಾಗಿದೆ. ಸೂರ್ಯ ಜೊತೆ ಸಂಜು ಸ್ಯಾಮ್ಸನ್ ಭವಿಷ್ಯ ಕೂಡ ಇದೇ ಸರಣಿ ಮೇಲೆ ನಿಂತಿದೆ. ಮೊದಲ ಟಿ20 ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ತಿಲಕ್ ವರ್ಮಾ ಭರವಸೆ ಮೂಡಿಸಿದ್ದಾರೆ.
ಇಂಡೊ-ವಿಂಡೀಸ್ 2ನೇ ಟಿ20: ಎಷ್ಟು ಗಂಟೆಗೆ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ
ನಾಯಕ ಹಾರ್ದಿಕ್ ಪಾಂಡ್ಯ ಕಡೆಯಿಂದ ಆಲ್ರೌಂಡ್ ಆಟ ಬರಬೇಕಿದೆ. ಅಕ್ಷರ್ ಪಟೇಲ್ ಕೂಡ ಸದ್ದು ಮಾಡಬೇಕಿದೆ. ಹಿಂದಿನ ಪಂದ್ಯದಲ್ಲಿ ಅಕ್ಷರ್ ಜೊತೆ ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್ ಹೀಗೆ ಮೂವರು ಸ್ಪಿನ್ನರ್ಗಳು ಕಣಕ್ಕಿಳಿದಿದ್ದರು. ಇಂದು ಓರ್ವ ಸ್ಪಿನ್ನರ್ ಅನ್ನು ಕೈಬಿಡುವ ಸಾಧ್ಯತೆ ಇದೆ. ಅರ್ಶ್ದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್ ಪ್ರಮುಖ ವೇಗಿಗಳಾಗಿದ್ದು, ಇವರ ಜೊತೆಗೆ ಉಮ್ರಾನ್ ಮಲಿಕ್ ಅಥವಾ ಆವೇಶ್ ಖಾನ್ ಕಣಕ್ಕಿಳಿಯುವ ಸಂಭವವಿದೆ.
ಇತ್ತ ವೆಸ್ಟ್ ಇಂಡೀಸ್ ತಂಡ ಬಲಿಷ್ಠವಾಗಿದೆ. ನಾಯಕ ರೋವ್ಮನ್ ಪೊವೆಲ್, ಬ್ರಾಂಡನ್ ಕಿಂಗ್ ಮತ್ತು ಅನುಭವಿ ನಿಕೋಲಸ್ ಪೂರನ್ ಭರ್ಜರಿ ಫಾರ್ಮ್ನಲ್ಲಿದ್ದು, ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇವರೊಂದಿಗೆ ಖೈಲ್ ಮೇಯರ್ಸ್, ಚಾರ್ಲೆಸ್ ಮತ್ತು ಹೆಟ್ಮೇರ್ ಅಬ್ಬರಿಸಿದರೆ ವಿಂಡೀಸ್ ದೊಡ್ಡ ಮೊತ್ತ ಕಲೆಹಾಕುವುದು ಖಚಿತ. ಬೌಲಿಂಗ್ನಲ್ಲಿ ಒಬೆಡ್ ಮೆಕಾಯ್, ರೊಮಾರಿಯೋ ಶೆಫೆರನ್ ಮತ್ತು ಜೇಸನ್ ಹೋಲ್ಡರ್ ಮಾರಕವಾಗಿದ್ದಾರೆ. ಕೆರಿಬಿಯನ್ ಪಡೆಯಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಅನುಮಾನ.
ಭಾರತ-ವೆಸ್ಟ್ ಇಂಡೀಸ್ ನಡುವಣ ಪ್ರಥಮ ಟಿ20 ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ. ದೂರದರ್ಶನ ಸ್ಪೋರ್ಟ್ಸ್ (ಡಿಡಿ ಸ್ಪೋರ್ಟ್ಸ್) ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಜೊತೆಗೆ ಲೈವ್ ಸ್ಟ್ರೀಮಿಂಗ್ FanCode ಮತ್ತು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಭಾರತ ಟಿ20 ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಸೂರ್ಯ ಕುಮಾರ್ ಯಾದವ್ (ಉಪನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಯಶಸ್ವಿ ಜೈಸ್ವಾಲ್, ಅವೇಶ್ ಖಾನ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್.
ವೆಸ್ಟ್ ಇಂಡೀಸ್ ಟಿ20 ತಂಡ: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್, ಶಾಯ್ ಹೋಪ್, ಶಿಮ್ರೋನ್ ಹೆಟ್ಮೆರ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಅಕೆಲ್ ಹೊಸೈನ್, ರೊಮಾರಿಯೋ ಶೆಫೆರನ್ ಓಡಿಯನ್ ಸ್ಮಿತ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ಒಶಾನೆ ಥೋಮಸ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ