ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಮತ್ತೊಂದು ಪಂದ್ಯದ ದಿನಾಂಕ ಬದಲು?
ODI World Cup 2023: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಕಣಕ್ಕಿಳಿಯಲಿದೆ.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ವೇಳಾಪಟ್ಟಿ ಐಸಿಸಿ (ICC) ಮತ್ತು ಬಿಸಿಸಿಐಗೆ (BCCI) ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಬಿಸಿಸಿಐ ಈಗಾಗಲೇ ವಿಶ್ವಕಪ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೀಗ ದಿನಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಅದರಂತೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ದಿನಾಂಕ ಬದಲಾಗುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಜರುಗಬೇಕಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯದ ದಿನಾಂಕವನ್ನು ಬದಲಿಸಬೇಕೆಂಬ ಬೇಡಿಕೆಯನ್ನು ಕೊಲ್ಕತ್ತಾದ ಪೊಲೀಸರು ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.
ಹೈವೋಲ್ಟೇಜ್ ಪಂದ್ಯದ ದಿನಾಂಕ ಬದಲು:
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15 ರಂದು ನಿಗದಿಯಾಗಿದ್ದ ಭಾರತ – ಪಾಕಿಸ್ತಾನ್ ನಡುವಣ ಪಂದ್ಯವು ಒಂದು ದಿನ ಮುಂಚಿತವಾಗಿ ಜರುಗಲಿದೆ. ಅಂದರೆ ಅಕ್ಟೋಬರ್ 15 ರಂದು ನವರಾತ್ರಿ ಹಬ್ಬ ಶುರುವಾಗಲಿದ್ದು, ಗುಜರಾತ್ನಾದ್ಯಂತ ಗರ್ಬಾ ಕಾರ್ಯಕ್ರಮಗಳು ನಡೆಯಲಿದೆ. ಹೀಗಾಗಿ ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ್ ಪಂದ್ಯ ನಡೆದರೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದರು. ಹೀಗಾಗಿ ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
ಇಂಗ್ಲೆಂಡ್-ಪಾಕಿಸ್ತಾನ್ ಪಂದ್ಯಕ್ಕೂ ಇದೇ ಸಮಸ್ಯೆ:
ನವೆಂಬರ್ 12 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯ ನಿಗದಿಯಾಗಿದೆ. ಆದರೆ ಅದೇ ದಿನ ಪಶ್ಚಿಮ ಬಂಗಾಳದಾದ್ಯಂತ ಅದ್ಧೂರಿ ಕಾಳಿ ಪೂಜೆ ನಡೆಯಲಿದೆ. ಇದರಿಂದ ನವೆಂಬರ್ 12 ರಂದು ಪಾಕಿಸ್ತಾನ್-ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೊಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪಂದ್ಯದ ದಿನಾಂಕವನ್ನು ಮರುನಿಗದಿ ಮಾಡುವಂತೆ ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ.
ಮರುನಿಗದಿಯೇ ದೊಡ್ಡ ಸಮಸ್ಯೆ:
ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ್ ನಡುವಣ ಪಂದ್ಯವನ್ನು ಮರುನಿಗದಿ ಮಾಡುವುದು ಖಚಿತವಾಗಿದೆ. ಆದರೆ ಈ ಮರುನಿಗದಿಯಿಂದಾಗಿ ಒಂದೇ ದಿನ ಒಟ್ಟು 3 ಪಂದ್ಯಗಳು ಜರುಗಲಿದೆ. ಅಂದರೆ ಇದೇ ದಿನಾಂಕದಂದು ಚೆನ್ನೈನಲ್ಲಿ ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ಮುಖಾಮುಖಿಯಾಗಲಿದೆ.
ಮತ್ತೊಂದೆಡೆ ಅಕ್ಟೋಬರ್ 14 ರಂದೇ ದೆಹಲಿಯಲ್ಲಿ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ. ಅಂದರೆ ಮರುನಿಗದಿಯಿಂದಾಗಿ ಒಂದೇ ದಿನ ಮೂರು ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ. ಹೀಗಾಗಿ ಇಂಗ್ಲೆಂಡ್-ಅಫ್ಘಾನಿಸ್ತಾನ್ ಅಥವಾ ನ್ಯೂಝಿಲೆಂಡ್-ಬಾಂಗ್ಲಾದೇಶ್ ನಡುವಣ ಈ ಪಂದ್ಯಗಳಲ್ಲಿ ಒಂದು ಪಂದ್ಯದ ದಿನಾಂಕವನ್ನೂ ಕೂಡ ಬದಲಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ ಸೆಮಿಫೈನಲ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಗ್ಲೆನ್ ಮೆಕ್ಗ್ರಾಥ್
ಅಲ್ಲದೆ ಪಂದ್ಯದ ದಿನಾಂಕವನ್ನು ಮರುನಿಗದಿ ಮಾಡುವಾಗ, ಆ ತಂಡಗಳ ಮುಂಬರುವ ಪಂದ್ಯಗಳ ದಿನಾಂಕವನ್ನು ಕೂಡ ಪರಿಗಣಿಸಬೇಕಾಗುತ್ತದೆ. ಅಲ್ಲದೆ ತಂಡಗಳಿಗೆ ನೀಡಲಾಗುವ ವಿಶ್ರಾಂತಿ ದಿನಗಳ ಲೆಕ್ಕಾಚಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಪಂದ್ಯಗಳ ಮರುನಿಗದಿಯು ಬಿಸಿಸಿಐಗೆ ಹೊಸ ತಲೆನೋವಾಗಿ ಪರಿಣಮಿಸಿದೆ.