IND vs WI: 42 ವರ್ಷಗಳ ನಂತರ ಬೇಡದ ದಾಖಲೆಗೆ ಕೊರಳೊಡ್ಡಿದ ಟೀಂ ಇಂಡಿಯಾ

India vs West Indies Test: ಭಾರತದ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಅದ್ಭುತ ಪ್ರದರ್ಶನ ನೀಡಿದೆ. 390 ರನ್ ಕಲೆಹಾಕಿ, ಎರಡು ಶತಕ, ಎರಡು ಅರ್ಧಶತಕಗಳನ್ನು ದಾಖಲಿಸಿದೆ. 42 ವರ್ಷಗಳ ನಂತರ ಭಾರತದ ವಿರುದ್ಧ 10ನೇ ವಿಕೆಟ್‌ಗೆ ದಾಖಲೆಯ ಜೊತೆಯಾಟ ನಡೆಸಿ ಭಾರತೀಯ ಬೌಲರ್‌ಗಳನ್ನು ಕಂಗೆಡಿಸಿದೆ. ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್ ಭಾರತಕ್ಕೆ ಹಿನ್ನಡೆಯಾಗಿ, ವಿಂಡೀಸ್ 350+ ರನ್ ಗಳಿಸಿತು.

IND vs WI: 42 ವರ್ಷಗಳ ನಂತರ ಬೇಡದ ದಾಖಲೆಗೆ ಕೊರಳೊಡ್ಡಿದ ಟೀಂ ಇಂಡಿಯಾ
Team India

Updated on: Oct 13, 2025 | 8:39 PM

ಭಾರತ ಪ್ರವಾಸದಲ್ಲಿ ಆಡಿದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೂರು ಇನ್ನಿಂಗ್ಸ್​ಗಳಲ್ಲಿ ಟೀಂ ಇಂಡಿಯಾದೆದುರು ಸಂಪೂರ್ಣವಾಗಿ ಶರಣಾಗಿದ್ದ ವೆಸ್ಟ್ ಇಂಡೀಸ್ ತಂಡ, (India vs West Indies) ಕೊನೆಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಮಾತ್ರ ಭಾರತದ ಬಲಿಷ್ಠ ಬೌಲಿಂಗ್ ಎದುರು ಒಂದೊಳ್ಳೆ ಪ್ರದರ್ಶನ ನೀಡಿತು. ಮೊದಲ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ 200 ರನ್​ಗಳ ಗಡಿ ದಾಟಲು ವಿಫಲವಾಗಿದ್ದ ಕೆರಿಬಿಯನ್ ಪಡೆ, ಎರಡನೇ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ 200 ರ ಗಡಿ ದಾಟಿತ್ತು. ಅದರಲ್ಲೂ ಎರಡನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿಂಡೀಸ್ 390 ರನ್ ಕಲೆಹಾಕುವುದರಲ್ಲೂ ಯಶಸ್ವಿಯಾಯಿತು. ಈ ಇನ್ನಿಂಗ್ಸ್​ನಲ್ಲಿ ವಿಂಡೀಸ್ ಪಾಳಯದಿಂದ 2 ಶತಕಗಳು ಸಿಡಿದರೆ, ಎರಡು ಅರ್ಧಶತಕಗಳು ದಾಖಲಾದವು. ಇನ್ನು ಇದೇ ಇನ್ನಿಂಗ್ಸ್​ನಲ್ಲಿ ಕೊನೆಯ ವಿಕೆಟ್​ಗೆ ವಿಂಡೀಸ್ ಆಟಗಾರರು ಅರ್ಧಶತಕದ ಜೊತೆಯಾಟವನ್ನು ನಡೆಸಿದರು. ಈ ಮೂಲಕ 42 ವರ್ಷಗಳ ನಂತರ ಭಾರತದ ವಿರುದ್ಧ ವಿಂಡೀಸ್ ತಂಡ ಅತಿದೊಡ್ಡ ಜೊತೆಯಾಟ ನಡೆಸಿದ ದಾಖಲೆ ಬರೆಯಿತು.

ಭಾರತೀಯ ಬೌಲರ್‌ಗಳ ಕಳಪೆ ಪ್ರದರ್ಶನ

10ನೇ ವಿಕೆಟ್​ಗೆ 89 ರನ್​ಗಳ ಜೊತೆಯಾಟ ಕಟ್ಟಿದ ವಿಂಡೀಸ್ 1982 ರ ನಂತರ ಭಾರತದಲ್ಲಿ ಕೊನೆಯ ವಿಕೆಟ್‌ಗೆ ಐವತ್ತಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನಾಡಿದ ದಾಖಲೆ ಬರೆಯಿತು. 1982 ರಲ್ಲಿ ಅಹಮದಾಬಾದ್​ನಲ್ಲಿ ನಡೆದ ಟೆಸ್ಟ್‌ನಲ್ಲಿ ವಿನ್ಸ್ಟನ್ ಡೇವಿಡ್ ಮತ್ತು ಜೆಫ್ ಡುಜಾನ್ 10ನೇ ವಿಕೆಟ್​ಗೆ 51 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು. ಈಗ ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ ಈ ಸಾಧನೆ ಮಾಡಿದ್ದಾರೆ. ಗಮನಾರ್ಹವಾಗಿ, ಗ್ರೀವ್ಸ್ 85 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರೆ, ಜೇಡನ್ ಸೀಲ್ಸ್ 67 ಎಸೆತಗಳಲ್ಲಿ 32 ರನ್ ಗಳಿಸಿದರು.

ಎರಡನೇ ಇನ್ನಿಂಗ್ಸ್​ನಲ್ಲಿ ವಿಂಡೀಸ್ ತಂಡ 390 ರನ್ ದಾಖಲಿಸುವಲ್ಲಿ ತಂಡದ ಕಳಪೆ ಬೌಲಿಂಗ್ ಜೊತೆಗೆ ಕಳಪೆ ಫಿಲ್ಡಿಂಗ್ ಕೂಡ ಕಾರಣವಾಯಿತು. ಇದರ ಲಾಭ ಪಡೆದ ವಿಂಡೀಸ್ 2013 ರ ನಂತರ ವಿದೇಶಿ ತಂಡವು ಭಾರತದಲ್ಲಿ ಅದರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ 350 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಬರೆಯಿತು. ಇದಲ್ಲದೆ, 2011ರ ನಂತರ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಇಷ್ಟು ಹೆಚ್ಚಿನ ಮೊತ್ತವನ್ನು ಗಳಿಸಿದ್ದು ಇದೇ ಮೊದಲು. ಹಾಗೆಯೇ ಇದೇ ಇನ್ನಿಂಗ್ಸ್​ನಲ್ಲಿ ವಿಂಡೀಸ್ ತಂಡ ಭಾರತದ ವಿರುದ್ಧ 10ನೇ ವಿಕಟ್​ಗೆ ಅತ್ಯಧಿಕ ಜೊತೆಯಾಟ ನಡೆಸಿದ ದಾಖಲೆಯನ್ನು ಬರೆಯಿತು.

ಭಾರತಕ್ಕೆ 121 ರನ್‌ಗಳ ಗುರಿ

ದೆಹಲಿ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ ತಂಡ ಭಾರತಕ್ಕೆ ಪ್ರತಿರೋಧ ಒಡ್ಡಿರಬಹುದು. ಆದರೆ ಭಾರತದ ಗೆಲುವನ್ನು ತಪ್ಪಿಸುವುದು ಅಸಾಧ್ಯ. ಏಕೆಂದರೆ ಮೊದಲ ಇನ್ನಿಂಗ್ಸ್​ನ ಮುನ್ನಡೆಯ ಆಧಾರದ ಮೇಲೆ ವಿಂಡೀಸ್ ತಂಡ 390 ರನ್ ಕಲೆಹಾಕಿದರೂ, ಭಾರತಕ್ಕೆ ಕೇವಲ 121 ರನ್ ಗುರಿ ಸಿಕ್ಕಿದೆ. ಈ ಗುರಿ ಬೆನ್ನಟ್ಟಿರುವ ಭಾರತ ತಂಡ ಒಂದು ವಿಕೆಟ್‌ಗೆ 63 ರನ್ ಕಲೆಹಾಕಿದ್ದು ಗೆಲುವಿನಿಂದ 58 ರನ್​ಗಳ ದೂರದಲ್ಲಿದೆ. ಸುದರ್ಶನ್ ಮತ್ತು ರಾಹುಲ್ ಅಜೇಯರಾಗಿ ಉಳಿದಿದ್ದು, ಐದನೇ ದಿನದಂದು ತಂಡವನ್ನು ಗೆಲುವಿನತ್ತ ಮುನ್ನಡೆಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 pm, Mon, 13 October 25