ಏಷ್ಯಾಕಪ್ 2022ರಲ್ಲಿ (Asia Cup 2022) ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿದ್ದು ಶನಿವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ತಂಡ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇಂದು ಎರಡನೇ ಪಂದ್ಯ ಆಯೋಜಿಸಲಾಗಿದ್ದು ಕ್ರಿಕೆಟ್ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡ ಮುಖಾಮುಖಿ ಆಗಲಿದೆ. ಈ ಬಾರಿಯ ಏಷ್ಯಾಕಪ್ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಅಮೋಘ ಗೆಲುವು ಕಂಡಿರುವ ಟೀಮ್ ಇಂಡಿಯಾ (Team India) ಜಯದ ನಾಗಾಲೋಟವನ್ನು ಮುಂದುವರೆಸುವ ತವಕದಲ್ಲಿದೆ. ಇತ್ತ ಲೀಗ್ ಹಂತದಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಲೀಗ್ ಹಂತದ ಪಂದ್ಯಗಳಲ್ಲಿ ಭಾರತ–ಪಾಕ್ ಮುಖಾಮುಖಿ ಆಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ- ರವೀಂದ್ರ ಜಡೇಜಾ ಭರ್ಜರಿ ಪ್ರದರ್ಶನ ನೀಡಿದ್ದರು. ಹೀಗಾಗಿ ಕಳೆದ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಪಾಂಡ್ಯ ಇಂದು ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ರವೀಂದ್ರ ಜಡೇಜಾ ಇಂಜುರಿಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಬದಲು ಅಕ್ಷರ್ ಪಟೇಲ್ಗೆ ಸ್ಥಾನ ನೀಡಲಾಗಿದೆ. ಆದರೆ, ಇವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.
ನಾಯಕ ರೋಹಿತ್ ಶರ್ಮಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಫಾರ್ಮ್ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ, ಕೆಎಲ್ ರಾಹುಲ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಏಷ್ಯಾಕಪ್ ಆರಂಭಕ್ಕೂ ಮುನ್ನ ನಡೆದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲೂ ರಾಹುಲ್ ವೈಫಲ್ಯ ಅನುಭವಿಸಿದ್ದರು. ಇದೀಗ ಆಡಿದ ಎರಡೂ ಪಂದ್ಯಗಳಲ್ಲಿ ಕನ್ನಡಿಗನ ಪ್ರದರ್ಶನ ತೀರಾ ಕಳಪೆಯಾಗಿದೆ. ಹೀಗಾಗಿ ಕೆಎಲ್ಗೆ ಅವಕಾಶ ಸಿಕ್ಕರೆ ಇಂದಿನ ಪಂದ್ಯ ಅಗ್ನಿಪರೀಕ್ಷೆ ಎನ್ನಬಹುದು.
ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಆಗಲೇಬೇಕಿದೆ. ವೇಗಿಗಳ ಪೈಕಿ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಬಿಟ್ಟರೆ ಮತ್ಯಾರು ಮಾರಕ ದಾಳಿ ಸಂಘಟಿಸುತ್ತಿಲ್ಲ. ಅರ್ಶ್ದೀಪ್ ಸಿಂಗ್ ಹಾಗೂ ಆವೇಶ್ ಖಾನ್ ದುಬಾರಿಯಾಗುತ್ತಿದ್ದಾರೆ. ವಿಕೆಟ್ ಕೂಡ ಪಡೆದುಕೊಳ್ಳುತ್ತಿಲ್ಲ. ಯುಜ್ವೇಂದ್ರ ಚಹಲ್ ರನ್ ಹರಿ ಬಿಡದಿದ್ದರೂ ವಿಕೆಟ್ ಪಡೆಯಲು ವಿಫಲರಾಗುತ್ತಿದ್ದಾರೆ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇತ್ತ ಪಾಕಿಸ್ತಾನ ಕಳೆದ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಗೆದ್ದು ಭರ್ಜರಿ ಫಾರ್ಮ್ಗೆ ಮರಳಿದೆ. ಬಾಬರ್ ಅಜಮ್ ಬ್ಯಾಟ್ನಿಂದ ರನ್ ಬರುತ್ತಿಲ್ಲವಾದರೂ ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಕುಶ್ದಿಲ್ ಶಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬೌಲಿಂಗ್ನಲ್ಲೂ ಪಾಕ್ ಮಾರಕವಾಗಿದೆ. ಹಾಂಗ್ ಕಾಂಗ್ ತಂಡವನ್ನು ಕೇವಲ 38 ರನ್ಗೆ ಆಲೌಟ್ ಮಾಡಿತ್ತು. ನಸೀಂ ಶಾ, ಶದಬ್ ಖಾನ್ ಹಾಗೂ ಮೊಹಮ್ಮದ್ ನವಾಜ್ ಪ್ರಮುಖ ವಿಕೆಟ್ ಟೇಕರ್ ಬೌಲರ್ಗಳಾಗಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದ ಪಿಚ್ ಸಮಯೋಜಿತವಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ. ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗುತ್ತದೆ. ಈ ಪಿಚ್‌ನಲ್ಲಿ ನಿಧಾನಗತಿಯ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದ ಇತಿಹಾಸವಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಪಾಕಿಸ್ತಾನ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ನಸೀಮ್ ಶಾ, ಹಸನ್ ಅಲಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.