IND vs SA: ಆಫ್ರಿಕಾಗೆ ವೈಟ್ ವಾಶ್ ಮುಖಭಂಗ; ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

|

Updated on: Jun 23, 2024 | 8:56 PM

South Africa Women vs India Women: ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮಹಿಳಾ ತಂಡ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 6 ವಿಕೆಟ್​​ಗಳ ಸುಲಭ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.

IND vs SA: ಆಫ್ರಿಕಾಗೆ ವೈಟ್ ವಾಶ್ ಮುಖಭಂಗ; ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ
ಭಾರತ ವನಿತಾ ಪಡೆ
Follow us on

ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮಹಿಳಾ ತಂಡ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ (India Women beat South Africa Women) ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 6 ವಿಕೆಟ್​​ಗಳ ಸುಲಭ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಮೊದಲೆರಡು ಪಂದ್ಯಗಳಲ್ಲೂ ಟೀಂ ಇಂಡಿಯಾ, ಆಫ್ರಿಕಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಇದರೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿತ್ತು. ಇದೀಗ ಕೊನೆಯ ಪಂದ್ಯವನ್ನು ಗೆದ್ದಿರುವ ಹರ್ಮನ್​ಪ್ರೀತ್ ಪಡೆ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ವೈಟ್ ವಾಶ್ ಮಾಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 215 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸ್ಮೃತಿ ಮಂಧಾನ (Smriti Mandhana) ಅವರ 90 ರನ್​ಗಳ ನೆರವಿನಿಂದ ಇನ್ನು 56 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.

ಶತಕದ ಜೊತೆಯಾಟ

ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾ ಮೊದಲ ವಿಕೆಟ್‌ಗೆ 102 ರನ್ ಸೇರಿಸಿತು. ಆ ಬಳಿಕ ಅರುಂಧತಿ ರೆಡ್ಡಿ ಈ ಜೊತೆಯಾಟ ಮುರಿಯುವಲ್ಲಿ ಯಶಸ್ವಿಯಾದರು. ಇಲ್ಲಿಂದ ದಕ್ಷಿಣ ಆಫ್ರಿಕಾ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಹೀಗಾಗಿ ಉತ್ತಮ ಆರಂಭದ ಹೊರತಾಗಿಯೂ ಆಫ್ರಿಕಾ ತಂಡ ಅಲ್ಪ ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತದ ಪರ ಅರುಂಧತಿ ರೆಡ್ಡಿ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಶ್ರೇಯಾಂಕಾ ಪಾಟೀಲ್ ಮತ್ತು ಪೂಜಾ ವಸ್ತ್ರಕರ್ ತಲಾ ಒಂದು ವಿಕೆಟ್ ಪಡೆದರು.

IND vs SA: ಕೇವಲ ಹತ್ತೇ ಹತ್ತು ರನ್; ಹ್ಯಾಟ್ರಿಕ್ ಶತಕ ವಂಚಿತ ಸ್ಮೃತಿ ಮಂಧಾನ..!

ಭಾರತಕ್ಕೆ ಸುಲಭ ಜಯ

ಇನ್ನು ಕಡಿಮೆ ಮೊತ್ತಕ್ಕೆ ಆಫ್ರಿಕಾ ತಂಡವನ್ನು ನಿರ್ಭಂದಿಸುವ ಕೆಲಸವನ್ನು ತಂಡದ ಬೌಲರ್​ಗಳು ಮಾಡಿದರೆ, ರನ್ ಚೇಸ್ ವೇಳೆ ಟೀಂ ಇಂಡಿಯಾದ ಬ್ಯಾಟರ್​ಗಳು ಅಮೋಘ ಆಟವಾಡಿದರು. ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ 61 ರನ್​ಗಳ ಜೊತೆಯಾಟ ನೀಡಿದರು. ಇದಾದ ಬಳಿಕ ಶೆಫಾಲಿ ವರ್ಮಾ 25 ರನ್ ಗಳಿಸಿ ಔಟಾದರು. ಶೆಫಾಲಿ ವರ್ಮಾ ಔಟಾದ ನಂತರ ಸ್ಮೃತಿ ಮಂಧಾನ ವೇಗದ ಬ್ಯಾಟಿಂಗ್ ಮುಂದುವರಿಸಿದರು. ಆದರೆ, 83 ಎಸೆತಗಳಲ್ಲಿ 90 ರನ್ ಗಳಿಸಿ ಶತಕ ವಂಚಿತರಾಗಿ ಔಟಾದರು.

ಈ ಸರಣಿಯಲ್ಲಿ ಸ್ಮೃತಿ ಮಂಧಾನಕ್ಕೆ ಮೂರನೇ ಶತಕ ಬಾರಿಸಲು ಉತ್ತಮ ಅವಕಾಶ ಸಿಕ್ಕಿತ್ತು. ಆದರೆ ಒಂದೇ ಒಂದು ತಪ್ಪು ಹೊಡೆತದಿಂದಾಗಿ ವಿಕೆಟ್ ಕೈಚೆಲ್ಲಿದರು. ಸ್ಮೃತಿ ಮಂಧಾನ ಹೊರತಾಗಿ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 48 ಎಸೆತಗಳಲ್ಲಿ 42 ರನ್ ಕಲೆಹಾಕಿದರು. ಅಂತಿಮವಾಗಿ 216 ರನ್​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 40.4 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವು ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Sun, 23 June 24