2.5 ಓವರ್​​ಗಳಲ್ಲಿ ಮುಗಿದ ಪಂದ್ಯ: ಭಾರತಕ್ಕೆ ಭರ್ಜರಿ ಜಯ

|

Updated on: Jan 21, 2025 | 2:39 PM

ICC Under 19 Womens T20 World Cup 2025: ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಅಂಡರ್-19 ಟಿ20 ವಿಶ್ವಕಪ್​ ಪಂದ್ಯದಲ್ಲಿ ಟೀಮ್ ಇಂಡಿಯಾದ ವೈಷ್ಣವಿ ಶರ್ಮಾ 4 ಓವರ್​ಗಳಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಭರ್ಜರಿ ಬೌಲಿಂಗ್​ನೊಂದಿಗೆ ಈ ಪಂದ್ಯದಲ್ಲಿ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ.

2.5 ಓವರ್​​ಗಳಲ್ಲಿ ಮುಗಿದ ಪಂದ್ಯ: ಭಾರತಕ್ಕೆ ಭರ್ಜರಿ ಜಯ
Team India
Follow us on

ಕೌಲಾಲಂಪುರ್​ನ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್​ನ 16ನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಮಲೇಷ್ಯಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ನಿಕಿ ಪ್ರಸಾದ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮಲೇಷ್ಯಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.

ಭಾರತೀಯ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ರನ್​ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಕೂಡ ಮಲೇಷ್ಯಾ ಬ್ಯಾಟರ್​ಗಳು ಪರದಾಡಿದರು. ಪರಿಣಾಮ ಪವರ್​ಪ್ಲೇ ಮುಗಿಯುವ ಮುನ್ನವೇ ಕೇವಲ 22 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಆ ಬಳಿಕ ಬಂದ ಬ್ಯಾಟರ್​​ಗಳನ್ನು ಬಂದ ವೇಗದಲ್ಲೇ ಪೆವಿಲಿಯನ್​ಗೆ ಕಳುಹಿಸುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಯಶಸ್ವಿಯಾದರು. ಪರಿಣಾಮ 14.3 ಓವರ್​​ಗಳಲ್ಲಿ ಮಲೇಷ್ಯಾ ತಂಡವು ಕೇವಲ 31 ರನ್​ಗಳಿಸಿ ಆಲೌಟ್ ಆಯಿತು.

ಟೀಮ್ ಇಂಡಿಯಾ ಪರ ವೈಷ್ಣವಿ ಶರ್ಮಾ 4 ಓವರ್​ಗಳಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಆಯುಷಿ ಶುಕ್ಲಾ 3.3 ಓವರ್​ಗಳಲ್ಲಿ 8 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇನ್ನು ಜೋಶಿತಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

17 ಎಸೆತಗಳಲ್ಲಿ ಮುಗಿದ ಪಂದ್ಯ:

32 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಗೊಂಗಡಿ ತ್ರಿಷಾ 12 ಎಸೆತಗಳಲ್ಲಿ 5 ಫೋರ್​​ಗಳೊಂದಿಗೆ 27 ರನ್ ಬಾರಿಸಿದರೆ, ಕಮಿಲಿನಿ 4 ರನ್ ಕಲೆಹಾಕಿದರು. ಈ ಮೂಲಕ ಭಾರತ ತಂಡವು 2.5 ಓವರ್​ಗಳಲ್ಲಿ 32 ರನ್ ಕಲೆಹಾಕಿ 10 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ.

ಭಾರತ ಮಹಿಳಾ U19 ಪ್ಲೇಯಿಂಗ್ 11: ಗೊಂಗಡಿ ತ್ರಿಷಾ , ಜಿ ಕಮಲಿನಿ (ವಿಕೆಟ್ ಕೀಪರ್) , ಸಾನಿಕಾ ಚಲ್ಕೆ , ನಿಕಿ ಪ್ರಸಾದ್ ( ನಾಯಕಿ ) , ಭಾವಿಕಾ ಅಹಿರೆ , ಮಿಥಿಲಾ ವಿನೋದ್ , ಆಯುಷಿ ಶುಕ್ಲಾ , ಜೋಶಿತಾ ವಿಜೆ , ಶಬ್ನಮ್ ಶಕಿಲ್ , ಪರುಣಿಕಾ ಸಿಸೋಡಿಯಾ , ವೈಷ್ಣವಿ ಶರ್ಮಾ.

ಇದನ್ನೂ ಓದಿ: 26 ಸಿಕ್ಸ್, 17 ಫೋರ್​: RCBಯಿಂದ ಹೊರಬಿದ್ದ ಬಳಿಕ ಗ್ಲೆನ್ ಮ್ಯಾಕ್ಸ್​ವೆಲ್ ಸಿಡಿಲಬ್ಬರ

ಮಲೇಷ್ಯಾ ಮಹಿಳಾ U19 ಪ್ಲೇಯಿಂಗ್ 11: ನೂರ್ ಅಲಿಯಾ ಹೈರುನ್ (ವಿಕೆಟ್ ಕೀಪರ್) , ನುನಿ ಫರಿನಿ ಸಫ್ರಿ , ಹುಸ್ನಾ , ನೂರ್ ದಾನಿಯಾ ಸ್ಯುಹದಾ (ನಾಯಕಿ) , ನೂರ್ ಇಜ್ಜತುಲ್ ಸೈಫಿಕಾ , ನೂರಿಮಾನ್ ಹಿದಾಯ , ಸುಬಿಕಾ ಮಣಿವಣ್ಣನ್ , ನೂರ್ ಐನ್ ಬಿಂಟಿ ರೋಸ್ಲಾನ್ , ನೂರ್ ಇಸ್ಮಾ ದನಿಯಾ , ಸಿತಿ ಮರ್ಸಿಯಾ ಕ್ವಿಸ್ಟ್.