ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿ; ಪಾಕಿಸ್ತಾನ ಬಿಡಲು ಮುಂದಾದ ವಿದೇಶಿ ಆಟಗಾರರು

India's Retaliation: ಪಾಕಿಸ್ತಾನ ಬೆಂಬಲಿತ ಉಗ್ರರರು ಪಹಲ್ಗಾಮ್‌ ದಾಳಿಯ ನಂತರ ಭಾರತ ಪಾಕಿಸ್ತಾನದ ಮೇಲೆ ಡ್ರೋನ್ ದಾಳಿ ನಡೆಸಿದೆ. ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಹಲವು ಸ್ಥಳಗಳಿಗೆ ಹಾನಿಯಾಗಿದೆ. ಈ ದಾಳಿಯಿಂದ ಪಾಕಿಸ್ತಾನ ಸೂಪರ್ ಲೀಗ್ ರದ್ದಾಗುವ ಸಾಧ್ಯತೆಗಳಿವೆ. ಹಲವು ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳಲು ಮುಂದಾಗುತ್ತಿದ್ದಾರೆ.

ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿ; ಪಾಕಿಸ್ತಾನ ಬಿಡಲು ಮುಂದಾದ ವಿದೇಶಿ ಆಟಗಾರರು
Psl

Updated on: May 08, 2025 | 5:03 PM

ಪಹಲ್ಗಾಮ್‌ನಲ್ಲಿ 26 ಅಮಾಯಕ ಜೀವಗಳನ್ನು (Pahalgam Terror Attack) ಬಲಿ ಪಡೆದಿದ್ದ ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಭಾರತ ಸರಿಯಾದ ತಿರುಗೇಟು ನೀಡುತ್ತಿದೆ. ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಉಗ್ರರ ಅಡಗು ತಾಣಗಳನ್ನು ಭಾರತೀಯ ಸೇನೆ ಹುಡುಕಿ ಹುಡುಕಿ ಹೊಡೆಯಲಾರಂಭಿಸಿದೆ. ಭಾರತದ ದಾಳಿಗೆ ಪ್ರತಿದಾಳಿ ನಡೆಸಲು ಯತ್ನಿಸಿರುವ ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತದ ನಾಗರೀಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ಮಾಡಿರುವುದರಿಂದ ಕೆರಳಿ ಕೆಂಡವಾಗಿರುವ ಭಾರತ, ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ರಾವಲ್ಪಿಂಡಿಯಲ್ಲಿರುವ (Rawalpindi Cricket Stadium Attack) ಕ್ರಿಕೆಟ್ ಕ್ರೀಡಾಂಗಣವು ಹಾನಿಗೊಳಗಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ದಾಳಿ

ವರದಿಗಳ ಪ್ರಕಾರ, ಈ ದಾಳಿಯಲ್ಲಿ ಕ್ರೀಡಾಂಗಣದ ಬಳಿಯಿರುವ ರೆಸ್ಟೋರೆಂಟ್ ಕೂಡ ಹಾನಿಗೊಳಗಾಗಿದೆ. ಪಾಕಿಸ್ತಾನ ಮಾಧ್ಯಮಗಳ ಪ್ರಕಾರ, ಸಂಬಂಧಪಟ್ಟ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಮಾಡಿದ್ದು, ಡ್ರೋನ್ ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿರುವ ವರದಿಗಳಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವಾಸ್ತವವಾಗಿ ಪಾಕಿಸ್ತಾನ ಸೂಪರ್ ಲೀಗ್‌ನ 27 ನೇ ಪಂದ್ಯವು ಮೇ 8 ರಂದು (ಗುರುವಾರ) ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ಮತ್ತು ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ನಡುವೆ ನಡೆಯಬೇಕಿತ್ತು. ಆದರೀಗ ಈ ಪಂದ್ಯದ ಮೇಲೆ ಬಿಕ್ಕಟ್ಟಿನ ಮೋಡಗಳು ಕವಿಯುತ್ತಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್‌ಎಲ್ ಅನ್ನು ನಿಲ್ಲಿಸಲು ಇನ್ನೂ ನಿರ್ಧರಿಸಿಲ್ಲವಾದರೂ, ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದೆಂದು ವರದಿಯಾಗಿದೆ.

ಎರಡೂ ತಂಡಗಳಲ್ಲಿ ವಿದೇಶಿ ಆಟಗಾರರು

ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ತಂಡಗಳಲ್ಲಿ ಅನೇಕ ವಿದೇಶಿಯ ಆಟಗಾರರಿದ್ದಾರೆ. ನಾಯಕ ಡೇವಿಡ್ ವಾರ್ನರ್ ಹೊರತುಪಡಿಸಿ, ಕರಾಚಿ ಕಿಂಗ್ಸ್ ತಂಡದಲ್ಲಿ ಮೊಹಮ್ಮದ್ ನಬಿ, ಜೇಮ್ಸ್ ವಿನ್ಸ್, ಟಿಮ್ ಸೀಫರ್ಟ್ ಅವರಂತಹ ವಿದೇಶಿ ಆಟಗಾರರಿದ್ದಾರೆ. ಅದೇ ಸಮಯದಲ್ಲಿ, ಪೇಶಾವರ್ ಝಲ್ಮಿ ತಂಡದಲ್ಲಿ ಟಾಮ್ ಕೊಹ್ಲರ್ ಕ್ಯಾಡ್ಮೋರ್, ಲ್ಯೂಕ್ ವುಡ್, ಅಲ್ಜಾರಿ ಜೋಸೆಫ್, ಮ್ಯಾಕ್ಸ್ ಬ್ರ್ಯಾಂಟ್ ಇದ್ದಾರೆ. ಈಗ ಈ ಆಟಗಾರರ ಸುರಕ್ಷತೆ ಅಪಾಯದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ ಆಟಗಾರರು ತಮ್ಮ ದೇಶದ ಕ್ರಿಕೆಟ್ ಮಂಡಳಿಗೆ ಸಾಧ್ಯವಾದಷ್ಟು ಬೇಗ ಪಾಕಿಸ್ತಾನದಿಂದ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ.

ಪಾಕಿಸ್ತಾನ ಬಿಡಲು ಮುಂದಾದ ವಿದೇಶಿ ಆಟಗಾರರು

ಮೂಲಗಳ ಪ್ರಕಾರ, ಕೆಲವು ವಿದೇಶಿ ಆಟಗಾರರು ಪಾಕಿಸ್ತಾನ ತೊರೆಯಲು ಮುಂದಾಗಿದ್ದಾರೆ. ಮುಲ್ತಾನ್ ಸುಲ್ತಾನ್ಸ್ ತಂಡದ ಡೇವಿಡ್ ವಿಲ್ಲಿ ಮತ್ತು ಕ್ರಿಸ್ ಜೋರ್ಡಾನ್ ತಮ್ಮ ಫ್ರಾಂಚೈಸಿಗೆ ಈಗ ತವರಿಗೆ ಮರಳಲು ಬಯಸುವುದಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮತ್ತು ವೃತ್ತಿಪರ ಕ್ರಿಕೆಟಿಗರ ಸಂಘವು ಆಟಗಾರರೊಂದಿಗೆ ಸಂಪರ್ಕದಲ್ಲಿದೆ. ಆಟಗಾರರಿಗೆ ಪಾಕಿಸ್ತಾನ ತೊರೆಯುವಂತೆ ಇನ್ನೂ ಸೂಚನೆ ನೀಡಿಲ್ಲವಾದರೂ ಯುಕೆ ಸರ್ಕಾರ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Thu, 8 May 25