
ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ವಿಜಯ ಯಾತ್ರೆ ಮುಂದುವರಿದಿದೆ. ಸೂಪರ್ ಸಿಕ್ಸ್ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಸ್ಕಾಟ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿ ಸೆಮಿಫೈನಲ್‌ಗೆ ಎಂಟ್ರಿ ಪಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 208 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ ಕೇವಲ 58 ರನ್ ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಆಲ್‌ರೌಂಡರ್ ಪ್ರದರ್ಶನ ನೀಡಿದ ಗೊಂಗಡಿ ತ್ರಿಶಾ ಮೊದಲು ಬ್ಯಾಟಿಂಗ್ನಲ್ಲಿ ಕೇವಲ 59 ಎಸೆತಗಳಲ್ಲಿ 110 ರನ್‌ಗಳ ಬಿರುಸಿನ ಇನಿಂಗ್ಸ್ ಆಡಿದರೆ, ಇದಾದ ಬಳಿಕ ಬೌಲಿಂಗ್ನಲ್ಲೂ ಮ್ಯಾಜಿಕ್ ಪ್ರದರ್ಶಿಸಿ 6 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾದ ಗೆಲುವಿನ ರೂವಾರಿ ಎನಿಸಿಕೊಂಡರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾದ ಜಿ ಕಮಿಲಿನಿ ಮತ್ತು ಗೊಂಗಡಿ ತ್ರಿಶಾ ಶತಕದ ಜೊತೆಯಾಟ ನಡೆಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೊದಲ ವಿಕೆಟ್‌ಗೆ 147 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿದರು. ಕಾಮಿಲಿನಿ 42 ಎಸೆತಗಳಲ್ಲಿ 51 ರನ್ ಗಳಿಸಿದರೆ ತ್ರಿಶಾ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 110 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗಿ ಉಳಿದರು. ಈ ಮೂಲಕ ಮಹಿಳೆಯರ ಅಂಡರ್-19 ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟರ್ ಎಂಬ ದಾಖಲೆಯನ್ನು ತ್ರಿಶಾ ನಿರ್ಮಿಸಿದರು. ಅವರ ಶತಕದ ಆಧಾರದಲ್ಲಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 208 ರನ್ ಗಳಿಸಿದ್ದು ಈ ಟೂರ್ನಿಯ ಅತ್ಯುತ್ತಮ ದಾಖಲೆಯಾಗಿದೆ.
209 ರನ್‌ಗಳ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ಗೆ ಗುರಿಯ ಅರ್ಧದಷ್ಟು ರನ್ಗಳನ್ನು ಕಲೆಹಾಕಲು ಸಾಧ್ಯವಾಗಲಿಲ್ಲ. ಭಾರತದ ಎಡಗೈ ಸ್ಪಿನ್ನರ್‌ಗಳಾದ ಆಯುಷಿ ಶುಕ್ಲಾ ಮತ್ತು ವೈಷ್ಣವಿ ಶರ್ಮಾ ವಿಧ್ವಂಸಕ ಬೌಲಿಂಗ್ಗೆ ತತ್ತರಿಸಿದ ಸ್ಕಾಟ್ಲೆಂಡ್ ಕೇವಲ 13 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ಶತಕ ಬಾರಿಸಿದ ತ್ರಿಶಾ ಚೆಂಡಿನಲ್ಲೂ ಅದ್ಭುತ ಪ್ರದರ್ಶನ ನೀಡಿ ಮೂರು ವಿಕೆಟ್ ಕಬಳಿಸಿ ಸ್ಕಾಟ್ಲೆಂಡ್ ಇನ್ನಿಂಗ್ಸ್ಗೆ ನೋವಿನ ಅಂತ್ಯ ಹಾಡಿದರು.
ಈ ಗೆಲುವಿಗೂ ಮುನ್ನ ಟೀಂ ಇಂಡಿಯಾ ಸೆಮಿಫೈನಲ್‌ಗೆ ಪ್ರವೇಶ ಪಡೆದಿತ್ತು, ಆದರೆ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿರುವುದು ತಂಡದ ನೈತಿಕ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಆಡಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿತ್ತು. ಇದಾದ ಬಳಿಕ ಆತಿಥೇಯ ಮಲೇಷ್ಯಾವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಶ್ರೀಲಂಕಾ ಕೂಡ ಟೀಂ ಇಂಡಿಯಾ ವಿರುದ್ಧ 60 ರನ್‌ಗಳಿಂದ ಸೋತಿತ್ತು. ಸೂಪರ್ ಸಿಕ್ಸ್ ಗ್ರೂಪ್ 1 ರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಭಾರತ, ಇದೀಗ ಸ್ಕಾಟ್ಲೆಂಡ್ ಅನ್ನು 150 ರನ್‌ಗಳಿಂದ ಸೋಲಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ