20 ಸಿಕ್ಸರ್, 262 ರನ್; 37 ದಿನಗಳಲ್ಲಿ ಮೂರನೇ ದ್ವಿಶತಕ ಸಿಡಿಸಿದ ಸಮೀರ್ ರಿಜ್ವಿ
Samir Rizvi Double Century: ಸಮೀರ್ ರಿಜ್ವಿ ಅವರು ಗುಜರಾತ್ ವಿರುದ್ಧದ ಕರ್ನಲ್ ಸಿಕೆ ನಾಯುಡು ಟ್ರೋಫಿ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಅವರು ಕೇವಲ 159 ಎಸೆತಗಳಲ್ಲಿ 20 ಸಿಕ್ಸರ್‌ಗಳೊಂದಿಗೆ 262 ರನ್‌ಗಳ ದ್ವಿಶತಕದ ಇನ್ನಿಂಗ್ಸ್ ಆಡಿದ್ದಾರೆ. ಇದು ಕಳೆದ 37 ದಿನಗಳಲ್ಲಿ ಅವರ ಮೂರನೇ ದ್ವಿಶತಕವಾಗಿದೆ.
![20 ಸಿಕ್ಸರ್, 262 ರನ್; 37 ದಿನಗಳಲ್ಲಿ ಮೂರನೇ ದ್ವಿಶತಕ ಸಿಡಿಸಿದ ಸಮೀರ್ ರಿಜ್ವಿ](https://images.tv9kannada.com/wp-content/uploads/2025/01/samir-rizvi.jpg?w=1280)
ಒಂದೆಡೆ ದೇಶೀ ಟೂರ್ನಿ ರಣಜಿ ಟ್ರೋಫಿ ನಡೆಯುತ್ತಿದ್ದರೆ ಮತ್ತೊಂದೆಡೆ 23 ವರ್ಷದೊಳಗಿನವರ ಕರ್ನಲ್ ಸಿಕೆ ನಾಯುಡು ಟ್ರೋಫಿ ಕೂಡ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಉತ್ತರ ಪ್ರದೇಶ ಪರ ಆಡುತ್ತಿರುವ ಸಮೀರ್ ರಿಜ್ವಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ದಾಖಲೆಯ ದ್ವಿತಕ ಸಿಡಿಸಿದ್ದಾರೆ. ತಮ್ಮ ಇನ್ನಿಂಗ್ಸ್‌ನಲ್ಲಿ 159 ಎಸೆತಗಳನ್ನು ಎದುರಿಸಿದ ಸಮೀರ್ ರಿಜ್ವಿ 20 ಸಿಕ್ಸರ್‌ಗಳೊಂದಿಗೆ 262 ರನ್ ಕಲೆಹಾಕಿದರು. ಇದು ಕಳೆದ 37 ದಿನಗಳಲ್ಲಿ ಸಮೀರ್ ರಿಜ್ವಿ ಸಿಡಿಸಿದ ಮೂರನೇ ದ್ವಿಶತಕವಾಗಿದೆ.
20 ಸಿಕ್ಸರ್‌ಗಳೊಂದಿಗೆ 262 ರನ್
ಬಲಗೈ ಬ್ಯಾಟ್ಸ್‌ಮನ್ ಸಮೀರ್ ರಿಜ್ವಿ ಗುಜರಾತ್ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಅವರು 164.78 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ ಕೇವಲ 159 ಎಸೆತಗಳಲ್ಲಿ 262 ರನ್ ಗಳಿಸಿದರು. ಅವರ ಈ ವಿಧ್ವಂಸಕ ಇನ್ನಿಂಗ್ಸ್‌ನಲ್ಲಿ 20 ಸಿಕ್ಸರ್ ಮತ್ತು 21 ಬೌಂಡರಿಗಳು ಸೇರಿದ್ದವು. ಇದು ಮಾತ್ರವಲ್ಲದೆ ಸಮೀರ್ ರಿಜ್ವಿ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಸಹ ಆಟಗಾರ ಸ್ವಸ್ತಿಕ್ ಚಿಕಾರ ಅವರೊಂದಿಗೆ ಎರಡನೇ ವಿಕೆಟ್‌ಗೆ 381 ರನ್‌ಗಳ ಜೊತೆಯಾಟವನ್ನು ಮಾಡಿದರು.
37 ದಿನಗಳಲ್ಲಿ ಮೂರನೇ ದ್ವಿಶತಕ
ಕಳೆದ 37 ದಿನಗಳಲ್ಲಿ ಸಮೀರ್ ರಿಜ್ವಿ ಸಿಡಿಸಿದ ಮೂರನೇ ದ್ವಿಶತಕ ಇದಾಗಿದೆ. ಇದಕ್ಕೂ ಮುನ್ನ 23 ವರ್ಷದೊಳಗಿನವರ ರಾಜ್ಯ ಎ ಟ್ರೋಫಿ ಪಂದ್ಯದಲ್ಲಿ ಸಮೀರ್ 97 ಎಸೆತಗಳಲ್ಲಿ ವೇಗದ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಕೇವಲ 4 ದಿನಗಳ ನಂತರ ಅಂದರೆ ಡಿಸೆಂಬರ್ 25 ರಂದು ನಡೆದಿದ್ದ ವಿದರ್ಭ ವಿರುದ್ಧದ ಪಂದ್ಯದಲ್ಲಿ ಸಮೀರ್ ರಿಜ್ವಿ ಕೇವಲ 105 ಎಸೆತಗಳಲ್ಲಿ 202 ರನ್ ಸಿಡಿಸಿದ್ದರು. ಇದೀಗ ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಿಜ್ವಿ ಮೂರನೇ ದ್ವಿಶತಕ ಬಾರಿಸಿದ್ದಾರೆ.
View this post on Instagram
ಡೆಲ್ಲಿ ಪರ ಕಣಕ್ಕಿಳಿಯಲಿರುವ ರಿಜ್ವಿ
ಯಾವುದೇ ಸ್ವರೂಪವಿರಲಿ ಸಮೀರ್ ರಿಜ್ವಿ ಅವರ ಬ್ಯಾಟ್ ಮಾತ್ರ ಅಬ್ಬರಿಸುತ್ತಿದೆ. ಹೀಗಾಗಿ ಸಮೀರ್ ರಿಜ್ವಿ ಅವರ ಫಾರ್ಮ್ ನೋಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸಂತಸ ಮನೆ ಮಾಡಿದೆ. ಏಕೆಂದರೆ ಈ ವರ್ಷದ ಐಪಿಎಲ್ ಮೆಗಾ ಹರಾಜಿನಲ್ಲಿ ಸಮೀರ್ ರಿಜ್ವಿಯನ್ನು ಡೆಲ್ಲಿ ಕ್ಯಾಪಿಟಲ್ಸ್ 95 ಲಕ್ಷಕ್ಕೆ ಖರೀದಿಸಿದೆ. ಕಳೆದ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡಿದ್ದ ರಿಜ್ವಿ ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ