ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ (India Women vs South Africa Women) ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಬರೋಬ್ಬರಿ 143 ರನ್ಗಳಿಂದ ಮಣಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸ್ಮೃತಿ ಮಂಧಾನ (Smriti Mandhana) ಅವರ ಶತಕದ ಆಧಾರದ ಮೇಲೆ 265 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ, ಭಾರತದ ದಾಳಿಯ ಮುಂದೆ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 37.4 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 122 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಲೆಗ್ ಸ್ಪಿನ್ನರ್ ಆಶಾ ಶೋಭ್ನಾ (Asha Sobhana) ಗರಿಷ್ಠ 4 ವಿಕೆಟ್ ಪಡೆದು ಮಿಂಚಿದರು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಸ್ಕೋರ್ 15 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ದಯಾಳನ್ ಹೇಮಲತಾ ಕೂಡ 12 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ 10 ರನ್ಗಳಿಗೆ ಸುಸ್ತಾದರು. ಹೀಗಾಗಿ ತಂಡ ಕೇವಲ 53 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಇಲ್ಲಿಂದ ಸ್ಮೃತಿಗೆ ಜೊತೆಯಾದ ಜೆಮಿಮಾ ರಾಡ್ರಿಗಸ್ 17 ರನ್ಗಳ ಕಾಣಿಕೆ ನೀಡಿದಲ್ಲದೆ ತಂಡದ ಮೊತ್ತವನ್ನು 90 ರನ್ಗಳ ಗಡಿ ದಾಟಿಸಿದರು. ಈ ವೇಳೆ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಜೆಮಿಮಾ ಕ್ಯಾಚಿತ್ತು ಔಟಾದರು. ನಂತರ ಬಂದ ರಿಚಾ ಘೋಷ್ 3 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ಮತ್ತೊಮ್ಮೆ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ 7ನೇ ಕ್ರಮಾಂಕದಲ್ಲಿ ಬಂದ ದೀಪ್ತಿ ಶರ್ಮಾ 37 ರನ್ಗಳ ಇನ್ನಿಂಗ್ಸ್ ಆಡುವುದರ ಜೊತೆಗೆ ಸ್ಮೃತಿ ಜೊತೆ ಅರ್ಧಶತಕಕ್ಕೂ ಹೆಚ್ಚಿನ ಜೊತೆಯಾಟ ನೀಡಿದರು. ಈ ವೇಳೆಗೆ ಸ್ಮೃತಿ ತಮ್ಮ ಅರ್ಧಶತಕ ಪೂರೈಸಿದರು.
Vice-captain Smriti Mandhana scored a superb ton to set up #TeamIndia‘s win & bagged the Player of the Match award in the 1⃣st #INDvSA ODI 👏 👏
Scorecard ▶️ https://t.co/EbYe44lVao@mandhana_smriti | @IDFCFIRSTBank pic.twitter.com/7p5lL7MQMy
— BCCI Women (@BCCIWomen) June 16, 2024
8ನೇ ಕ್ರಮಾಂಕದಲ್ಲಿ ಬಂದ ಪೂಜಾ, ಸ್ಮೃತಿಗೆ ಉತ್ತಮ ಸಾಥ್ ನೀಡಿದಲ್ಲದೆ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು. ಇಬ್ಬರ ನಡುವೆ 50 ರನ್ಗಳ ಜೊತೆಯಾಟ ಕೂಡ ಮೂಡಿಬಂತು. ಈ ಹೊತ್ತಿಗೆ ಹೊಡಿಬಡಿ ಆಟಕ್ಕೆ ಮುಂದಾದ ಸ್ಮೃತಿ 93 ರನ್ಗಳಿರುವಾಗ ಭರ್ಜರಿ ಸಿಕ್ಸರ್ ಸಿಡಿಸಿ, ನಂತರದ ಎಸೆತದಲ್ಲಿ ಸಿಂಗಲ್ ಕದಿಯುವ ಮೂಲಕ ತಮ್ಮ ಶತಕ ಪೂರೈಸಿದರು. ಕೊನೆಗೆ 127 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 117 ರನ್ ಬಾರಿಸಿ ಸ್ಮೃತಿ ತಮ್ಮ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಭಾರತ ವನಿತಾ ಪಡೆ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿದೆ. ಈ ಮೂಲಕ ಆಫ್ರಿಕಾ ತಂಡಕ್ಕೆ 266 ರನ್ಗಳ ಟಾರ್ಗೆಟ್ ನೀಡಿತು.
ಗೆಲುವಿಗೆ 266 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕೆ ಸಿಲುಕಿತು. ಮೊದಲ ಓವರ್ನಲ್ಲೇ ರೇಣುಕಾ, ನಾಯಕಿ ಲಾರಾ ವೊಲ್ವಾರ್ಡ್ಟ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. 33 ರನ್ ಆಗುವಷ್ಟರಲ್ಲಿ ತಂಡ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅನುಭವಿ ಮರಿಜಾನ್ನೆ ಕಪ್ 24 ರನ್ ಕಲೆಹಾಕುವ ಮೂಲಕ ತಂಡದ ಇನ್ನಿಂಗ್ಸ್ಗೆ ಕೊಂಚ ಬಲ ತುಂಬಿದರು. ಆದರೆ ಈ ವಿಕೆಟ್ ಪತನದ ಬಳಿಕ ಆಫ್ರಿಕಾ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಕೆಳಕ್ರಮಾಂಕದಲ್ಲಿ ಸಿನಾಲೊ ಜಾಫ್ತಾ 27 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:13 pm, Sun, 16 June 24