INDW vs SAW: ವೃತ್ತಿ ಬದುಕಿನಲ್ಲಿ ಬೌಲ್ ಮಾಡಿದ ಮೊದಲ ಓವರ್​ನಲ್ಲೇ ವಿಕೆಟ್ ಕಿತ್ತ ಸ್ಮೃತಿ..! ವಿಡಿಯೋ ನೋಡಿ

|

Updated on: Jun 19, 2024 | 9:41 PM

Smriti Mandhana: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವ ಸ್ಮೃತಿ ಯಾವಾಗಲೂ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಬಲಿಷ್ಠ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿರುವ ಶ್ರೇಯ ಸ್ಮೃತಿಗೆ ಸಲ್ಲುತ್ತದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಮೃತಿ ತಮ್ಮ ಬ್ಯಾಟಿಂಗ್‌ನ ಹೊರತಾಗಿ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದರು.

INDW vs SAW: ವೃತ್ತಿ ಬದುಕಿನಲ್ಲಿ ಬೌಲ್ ಮಾಡಿದ ಮೊದಲ ಓವರ್​ನಲ್ಲೇ ವಿಕೆಟ್ ಕಿತ್ತ ಸ್ಮೃತಿ..! ವಿಡಿಯೋ ನೋಡಿ
ಸ್ಮೃತಿ ಮಂಧಾನ
Follow us on

ಬೆಂಗಳೂರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವನಿತಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವನಿತಾ ಪಡೆ  (India Women vs South Africa Women) 4 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿ ಕೂಡ ಕೈವಶ ಮಾಡಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಬರೋಬ್ಬರಿ 325 ರನ್ ಕಲೆಹಾಕಿತು. ಹೀಗಾಗಿ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದು ಕಾಣುತ್ತಿತ್ತು. ಆದರೆ ಗೆಲುವಾಗಿ ಹೋರಾಟ ನೀಡಿದ ಆಫ್ರಿಕಾ ವನಿತಾ ಪಡೆ 321 ರನ್ ಕಲೆಹಾಕಲಷ್ಟೇ ಶಕ್ತವಾಗಿ ವೀರೋಚಿತ ಸೋಲೊಪ್ಪಿಕೊಂಡಿತು. ಇದು ಪಂದ್ಯದ ಸಾರಾಂಶವಾದರೆ, ಈ ಪಂದ್ಯದಲ್ಲಿ ಅಚ್ಚರಿಯ ಸಂಗತಿಯೂ ನಡೆಯಿತು. ಅದೆನೆಂದರೆ ಈ ಪಂದ್ಯದಲ್ಲಿ ಮೊದಲು ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದ ಸ್ಮೃತಿ ಮಂಧಾನ (Smriti Mandhana), ಆ ಬಳಿಕ ಬೌಲಿಂಗ್​ನಲ್ಲೂ ಕೈಚಳ ತೋರಿದರು. ತಮ್ಮ ವೃತ್ತಿ ಬದುಕಿನಲ್ಲಿ ಬೌಲ್ ಮಾಡಿದ ಮೊದಲ ಓವರ್​ನಲ್ಲೇ ವಿಕೆಟ್ ಪಡೆಯುವ ಮೂಲಕ ಸ್ಮೃತಿ ಮಂಧಾನ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು.

ಹುಚ್ಚೆದ್ದು ಕುಣಿದ ಇಡೀ ಕ್ರೀಡಾಂಗಣ

ವಾಸ್ತವವಾಗಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವ ಸ್ಮೃತಿ ಯಾವಾಗಲೂ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಬಲಿಷ್ಠ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿರುವ ಶ್ರೇಯ ಸ್ಮೃತಿಗೆ ಸಲ್ಲುತ್ತದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಮೃತಿ ತಮ್ಮ ಬ್ಯಾಟಿಂಗ್‌ನ ಹೊರತಾಗಿ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಮೇಲೆ ಹೇಳಿದಂತೆ ತಮ್ಮ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಲು ಮುಂದಾದ ಸ್ಮೃತಿ, ತಾವು ಎಸೆದ ಮೊದಲ ಓವರ್​ನ ಎರಡನೇ ಎಸೆತದಲ್ಲಿ ಆಫ್ರಿಕಾ ಬ್ಯಾಟರ್ ಸುನೆ ಲೂಸ್ ಅವರ ವಿಕೆಟ್ ಪಡೆದರು.

ನಾಯಕಿಯ ಅಚ್ಚರಿಯ ನಿರ್ಧಾರ

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಅನುಭವಿ ವೇಗಿ ರೇಣುಕಾ ಸಿಂಗ್ ಠಾಕೂರ್ ಇಲ್ಲದೆ ಕಣಕ್ಕಿಳಿದಿತ್ತು. ಹೀಗಾಗಿ ತಂಡಕ್ಕೆ ಅವಶ್ಯಕ ಸಮಯದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅಚ್ಚರಿಯ ನಿರ್ಧಾರ ಕೈಗೊಂಡಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನಗೆ ಬೌಲಿಂಗ್ ನೀಡಿದರು. ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಚೆಂಡನ್ನು ಕೈಗೆತ್ತಿಕೊಂಡ ಮಂಧಾನ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿ ಎರಡನೇ ಎಸೆತದಲ್ಲಿಯೇ ವಿಕೆಟ್ ಪಡೆದರು. ಸ್ಮೃತಿ ವಿಕೆಟ್ ಪಡೆದ ಕೂಡಲೇ ಇಡೀ ಮೈದಾನವೇ ಹುಚ್ಚೆದ್ದು ಕುಣಿಯಿತು. ಸ್ವತಃ ಸ್ಮೃತಿ ಕೂಡ ತನಗೆ ವಿಕೆಟ್ ಸಿಕ್ಕಿದ್ದನ್ನು ನಂಬಲಾಗದೆ ಮೈದಾನ ತುಂಬ ಕುಣಿದು ಕುಪ್ಪಳಿಸಿದರು. ಸಹ ಆಟಗಾರ್ತಿಯರು ಕೂಡ ಸ್ಮೃತಿ ಮ್ಯಾಜಿಕ್​ಗೆ ಸಹಬ್ಬಾಸ್​ಗಿರಿ ನೀಡಿದರು. ಸ್ಮೃತಿ ತಮ್ಮ ಮೊದಲ ಓವರ್‌ನಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಕೇವಲ 6 ರನ್ ನೀಡಿದರು.

Breaking: ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಸಿಡಿಸಿದ ಸ್ಮೃತಿ ಮಂಧಾನ..!

ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಸ್ಮೃತಿ

ಬೌಲಿಂಗ್​ನಲ್ಲಿ ಈ ಮ್ಯಾಜಿ ಮಾಡುವುದಕ್ಕೂ ಮುನ್ನ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಸ್ಮೃತಿ ಮಂಧಾನ, 120 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 136 ರನ್ ಚಚ್ಚಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಇದಕ್ಕೂ ಮೊದಲು ಏಕದಿನ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 135 ರನ್ ಆಗಿತ್ತು. ಅದು ಕೂಡ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಿಸಿದ್ದ ಮೊತ್ತವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 pm, Wed, 19 June 24