Breaking: ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಸಿಡಿಸಿದ ಸ್ಮೃತಿ ಮಂಧಾನ..!

|

Updated on: Jun 19, 2024 | 4:40 PM

INDW vs SAW Smriti Mandhana: ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಂಧಾನ ಅವರ 7ನೇ ಶತಕವಾಗಿದೆ.

Breaking: ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಸಿಡಿಸಿದ ಸ್ಮೃತಿ ಮಂಧಾನ..!
ಸ್ಮೃತಿ ಮಂಧಾನ
Follow us on

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ (India Women vs South Africa Women) ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಂಧಾನ ಅವರ 7ನೇ ಶತಕವಾಗಿದೆ. ಮೊದಲ ಏಕದಿನ ಪಂದ್ಯದಂತೆ ಎರಡನೇ ಏಕದಿನ ಪಂದ್ಯದಲ್ಲೂ ಅದ್ಭುತ ಇನ್ನಿಂಗ್ಸ್ ಕಟ್ಟಿರುವ ಸ್ಮೃತಿ 103 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಶತಕ ಪೂರೈಸಿದ್ದಾರೆ. ಈ ಶತಕದ ಇನ್ನಿಂಗ್ಸ್ ಜೊತೆಗೆ ಸ್ಮೃತಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ಶತಕ ಸಿಡಿಸಿದ ಮಹಿಳಾ ಆಟಗಾರ್ತಿಯರಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದ್ದಾರೆ. ಸ್ಮೃತಿಗೂ ಮೊದಲು ತಂಡದ ಮಾಜಿ ನಾಯಕ ಮಿಥಾಲಿ ರಾಜ್ ಏಕದಿನದಲ್ಲಿ ಭಾರತದ 7 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದರು.

ಜಂಟಿ ಮೊದಲ ಸ್ಥಾನ

ಮೇಲೆ ಹೇಳಿದಂತೆ ಏಕದಿನದಲ್ಲಿ ಸ್ಮೃತಿ ಮಂಧಾನ ಅವರ 7ನೇ ಶತಕ ಇದಾಗಿದೆ. ಇದರೊಂದಿಗೆ ಅವರು ಭಾರತದ ಪರ ಅತಿ ಹೆಚ್ಚು ಶತಕ ಬಾರಿಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಸರಿಗಟ್ಟಿದ್ದಾರೆ. ಅಂದಹಾಗೆ, ಏಕದಿನದಲ್ಲಿ 7 ಶತಕ ಸಿಡಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ್ತಿ ಮಂಧಾನ. ಮಂಧಾನ ಕೇವಲ 84 ಇನ್ನಿಂಗ್ಸ್‌ಗಳಲ್ಲಿ 7 ಏಕದಿನ ಶತಕ ಪೂರೈಸಿದ್ದಾರೆ. ಮತ್ತೊಂದೆಡೆ, ಮಿಥಾಲಿ 7 ಶತಕಗಳನ್ನು ಬಾರಿಸಲು 211 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಇವರಿಬ್ಬರನ್ನು ಹೊರತುಪಡಿಸಿ ಹಾಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ 5 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಆಮೆಗತಿಯ ಆರಂಭ

ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ವನಿತಾ ಪಡೆ ಬೆಂಗಳೂರಿನ ನಿಧಾನಗತಿಯ ಪಿಚ್‌ನಲ್ಲಿ ನಿಧಾನಗತಿಯ ಆರಂಭ ಪಡೆಯಿತು. ಮೊದಲ 10 ಓವರ್‌ಗಳಲ್ಲಿ ಟೀಂ ಇಂಡಿಯಾ 28 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 17 ಓವರ್‌ಗಳಲ್ಲಿ ಟೀಂ ಇಂಡಿಯಾದ 50 ರನ್‌ಗಳು ಪೂರ್ಣಗೊಂಡವು. ಆದರೆ ಇದಾದ ಬಳಿಕ ಮಂಧಾನ ಮತ್ತು ಹೇಮಲತಾ ವೇಗದ ಬ್ಯಾಟಿಂಗ್ ನಡೆಸಿ ಕೇವಲ 57 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ನೀಡಿದರು.

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಸ್ಮೃತಿ ಮಂಧಾನ..!

ಈ ವೇಳೆ ಮಂಧಾನ 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹೇಮಲತಾ ಅವರ ವಿಕೆಟ್ ಪತನದ ನಂತರ, ಮಂಧಾನ ಜೊತೆಗೂಡಿದ ನಾಯಕಿ ಹರ್ಮನ್‌ಪ್ರೀತ್ ಸ್ಫೋಟಕ ಆಟಕ್ಕೆ ಮುಂದಾದರು. ಇವರಿಬ್ಬರೂ ಕೇವಲ 90 ಎಸೆತಗಳಲ್ಲಿ ಶತಕದ ಜೊತೆಯಾಟ ನೀಡುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಹಿಮ್ಮೆಟ್ಟಿಸಿದರು. ಹರ್ಮನ್‌ಪ್ರೀತ್ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಮಂಧಾನ 103 ಎಸೆತಗಳಲ್ಲಿ ದಾಖಲೆಯ ಶತಕ ಗಳಿಸುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Wed, 19 June 24