14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟೂರ್ನಿ ಅಂತಿಮ ಹಂತಕ್ಕೆ ತಲುಪುತ್ತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿದೆ. ಹೀಗೆ ಉತ್ತಮ ಫಾರ್ಮ್ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ಕ್ರಿಕೆಟ್ ಅಭಿಮಾನಿಗಳು ನೀಡಿರುವ ಉತ್ತರ ಮುಖಭಂಗ ಉಂಟು ಮಾಡಿದೆ.
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ‘ಕೂ’ ವೇದಿಕೆಯಲ್ಲಿ ಪೋಲ್ ಮೂಲಕ ‘ಈ ಬಾರಿಯ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರ ಯಾರು ?’ ಎಂದು ಕೇಳಿದ್ದ ಪ್ರಶ್ನೆಗೆ ನೆಟ್ಟಿಗರು ಈ ಉತ್ತರ ನೀಡಿದ್ದಾರೆ. ಪೋಲ್ನಲ್ಲಿ , ಸುನೀಲ್ ನಾರೈನ್, ಅಮಿತ್ ಮಿಶ್ರ, ಶಿಖರ್ ಧವನ್ ಮತ್ತು ರಾಯುಡು ಎಂಬ ನಾಲ್ಕು ಆಯ್ಕೆಗಳನ್ನು ಸೆಹ್ವಾಗ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ರಾಯುಡುವನ್ನು ಆಯ್ಕೆ ಮಾಡಿದ್ದಾರೆ. ರಾಯುಡು ನಂತರದ ಸ್ಥಾನದಲ್ಲಿ ಶಿಖರ್ ಧವನ್, ಅಮಿತ್ ಮಿಶ್ರ, ಸುನಿಲ್ ಕ್ರಮವಾಗಿ ಇದ್ದಾರೆ. ಇತ್ತೀಚೆಗಷ್ಟೇ ಕೂ ಕುಟುಂಬವನ್ನು ಸೇರಿದ್ದ ಸೆಹ್ವಾಗ್ ಅವರಿಗೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ಲಭಿಸಿತ್ತು.
ಸಿಎಸ್ಕೆ ಪ್ರದರ್ಶನ
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಈವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದ್ದು 10 ಪಂದ್ಯಗಳಲ್ಲಿ ಗೆದ್ದಿದೆ. ಮೂರು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 18 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.739 ನೆಟ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಧೋನಿ ಪಡೆ ಇಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೆ. ಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.