ಐಪಿಎಲ್ನ 27ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಡೆಲ್ಲಿ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಈಗಾಗಲೇ ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಆರ್ಸಿಬಿ 5 ಪಂದ್ಯಗಳಲ್ಲಿ 3 ಜಯ ಸಾಧಿಸಿದೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ವಿರುದ್ದ ಸೋತಿತ್ತು. ಇನ್ನು ಡೆಲ್ಲಿ ತಂಡವು ಕಳೆದ ಪಂದ್ಯದಲ್ಲಿ ಬಲಿಷ್ಠ ಕೆಕೆಆರ್ ತಂಡಕ್ಕೆ ಸೋಲುಣಿಸಿತ್ತು. ಹೀಗಾಗಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಇನ್ನು ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಆರ್ಸಿಬಿ ತಂಡವು 15 ಬಾರಿ ಗೆದ್ದಿದೆ. ಇನ್ನು ಡೆಲ್ಲಿ ಗೆದ್ದಿರುವುದು ಕೇವಲ 10 ಬಾರಿ ಮಾತ್ರ. ಇನ್ನು ಕಳೆದ ಸೀಸನ್ನಲ್ಲಿ 2 ಪಂದ್ಯಗಳಲ್ಲೂ ಆರ್ಸಿಬಿ ತಂಡವೇ ಗೆದ್ದಿದೆ. ಅಂದರೆ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆರ್ಸಿಬಿ ಮೇಲುಗೈ ಸಾಧಿಸುತ್ತಾ ಬಂದಿದೆ.
ಈ ಬಾರಿ ಎರಡೂ ತಂಡಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅದರಂತೆ ಆರ್ಸಿಬಿ ತಂಡಕ್ಕೆ ಫಾಫ್ ಡುಪ್ಲೆಸಿಸ್ ಎಂಟ್ರಿ ಕೊಟ್ಟಿದ್ದರೆ, ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್ ಇದ್ದಾರೆ. ಹಾಗೆಯೇ ಇತ್ತ ವಿರಾಟ್ ಕೊಹ್ಲಿ ಇದ್ದರೆ, ಅತ್ತ ರಿಷಭ್ ಪಂತ್ ಇದ್ದಾರೆ. ಸ್ಪೋಟಕ ಬ್ಯಾಟ್ಸ್ಮನ್ ಆಗಿ ಪೃಥ್ವಿ ಶಾ ಇದ್ದರೆ, ಆರ್ಸಿಬಿ ತಂಡದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಇದ್ದಾರೆ. ಇನ್ನು ಬೌಲಿಂಗ್ನಲ್ಲಿ ಆರ್ಸಿಬಿ ಪರ ಜೋಶ್ ಹ್ಯಾಝಲ್‌ವುಡ್ ಇದ್ದರೆ, ಡೆಲ್ಲಿ ತಂಡದಲ್ಲಿ ಅನ್ರಿಕ್ ನೋಕಿಯಾ ಇದ್ದಾರೆ. ಹೀಗಾಗಿ ಎರಡೂ ತಂಡಗಳು ಸಮಬಲ ಹೊಂದಿದೆ ಎಂದೇ ಹೇಳಬಹುದು.
ಆರ್ಸಿಬಿ ತಂಡದಲ್ಲಿ ಒಂದು ಬದಲಾವಣೆ:
ಈ ಪಂದ್ಯಕ್ಕಾಗಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅದರಂತೆ ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ಪರ ಇಂದಿನ ಪಂದ್ಯದಲ್ಲಿ ಪಾದರ್ಪಣೆ ಮಾಡಿದ್ದಾರೆ. ಹಾಗೆಯೇ ಆರ್ಸಿಬಿ ತಂಡಕ್ಕೆ ಹರ್ಷಲ್ ಪಟೇಲ್ ವಾಪಾಸಾಗಿದ್ದು, ಹೀಗಾಗಿ ಆಕಾಶ್ ದೀಪ್ ಹೊರಗುಳಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಮೊಹಮ್ಮದ್ ಸಿರಾಜ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ), ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್