15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳಿರುವುದು. ಇದೇ ಫೆಬ್ರವರಿ 12 ಮತ್ತು 13 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತಿ ದೊಡ್ಡ ಮೆಗಾ ಆಕ್ಷನ್ (IPL Mega Auction) ನಡೆಯಲಿದೆ. ಈಗಾಗಲೇ ಬಹುತೇಕ ಎಲ್ಲ ಫ್ರಾಂಚೈಸಿ ಹರಾಜು ಪ್ರಕ್ರಿಯೆಗೆ ಭರ್ಜರಿ ತಯಾರಿ ಆರಂಭಿಸಿದೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿಶೇಷ ಪ್ಲಾನ್ ರೂಪಿಸಿದಂತಿದೆ. ಈಗಾಗಲೇ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳಿರುವಾಗ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈಗೆ ಬಂದಿಳಿದಿರುವ ವಿಚಾರ ತಿಳಿದೇ ಇದೆ. ಮೆಗಾ ಹರಾಜಿಗೂ ಮೊದಲು ತಂಡಕ್ಕೆ ಯಾವ ಆಟಗಾರರನ್ನು ಖರೀದಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮ್ಯಾನೇಜ್ ಮೆಂಟ್ ಜೊತೆಗೆ ಚರ್ಚಿಸಲು ಧೋನಿ ಚೆನ್ನೈ ಫ್ರಾಂಚೈಸಿ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಹೀಗಿರುವಾಗ ಸಿಎಸ್ಕೆ ಮ್ಯಾನೇಜ್ಮೆಂಟ್ನಿಂಧ ಮತ್ತೊಂದು ಸುದ್ದಿ ಹೊರಬಿದ್ದಿದೆ.
ಅದೇನೆಂದರೆ ಐಪಿಎಲ್ 2022 ಮೆಗಾ ಆಕ್ಷನ್ ನಡೆಯುವ ಸಮಯದಲ್ಲಿ ಚೆನ್ನೈ ಟೇಬಲ್ನಲ್ಲಿ ಇತರೆ ಸದಸ್ಯರ ಜೊತೆ ಎಂಎಸ್ ಧೋನಿ ಕೂಡ ಇರಲಿದ್ದಾರಂತೆ. ಈ ಬಗ್ಗೆ ಸಿಎಸ್ಕೆ ಅಧಿಕೃತ ಮೂಲಗಳು ತಿಳಿಸಿವೆ ಎಂದು ಇನ್ಸೈಡ್ ಸ್ಫೋರ್ಟ್ಸ್ ವರದಿ ಮಾಡಿದೆ. “ಮಾಹಿ ಸದ್ಯ ಹರಾಜಿನ ಕುರಿತ ಚರ್ಚೆಗಾಗಿ ಚೆನ್ನೈನಲ್ಲಿದ್ದಾರೆ. ಅವರು ಹರಾಜು ಪ್ರಕ್ರಿಯೆಗೂ ಬರುವ ಸಾಧ್ಯತೆ ಇದೆ. ಆದರೆ, ನಾವು ಒತ್ತಡ ಹಾಕುವುದಿಲ್ಲ, ಅದು ಅವರ ನಿರ್ಧಾರ. ಅವರು ಬಂದರೆ ಧೋನಿ ಅನುಭವ, ತಂಡಕ್ಕೆ ಯಾವ ಆಟಗಾರ ಬೇಕು ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತದೆ,” ಎಂದು ಚೆನ್ನೈ ಮ್ಯಾನೇಜ್ಮೆಂಟ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯಶಸ್ವಿ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಸಿಎಸ್ಕೆ ತಂಡಕ್ಕೆ ಹಲವಾರು ಸಲ ಪ್ರಶಸ್ತಿ ತಂದುಕೊಟ್ಟಿದ್ದಾರೆ. 2022ರ ಆವೃತ್ತಿಗಾಗಿ ಸಿಎಸ್ಕೆ ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಮೊಯಿನ್ ಅಲಿ ಮತ್ತು ಆರಂಭಿಕ ಆಟಗಾರ ಋತುರಾಜ್ ಗಾಯ್ಕವಾಡ್ಗೆ ತಂಡದಲ್ಲೇ ಉಳಿಸಿಕೊಂಡಿದೆ. ಇದೀಗ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಯಾವೆಲ್ಲ ಆಟಗಾರರ ಖರೀದಿ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಭಾಗವಾಗಿರುವ ಮಹೇಂದ್ರ ಸಿಂಗ್ ಧೋನಿ ಆಟಗಾರರ ಖರೀದಿಗಾಗಿ ಮಹತ್ವದ ಪ್ಲಾನ್ ರೂಪಿಸಲಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ಮೂಲಕ 2022ರ ಐಪಿಎಲ್ ಪ್ರಶಸ್ತಿ ಮೇಲೂ ಕಣ್ಣಿಟ್ಟಿದ್ದು, ಈಗಲೇ ತಯಾರಿಯನ್ನು ಆರಂಭಿಸಿದೆ.
ಮುಂಬೈ-ಅಹ್ಮದಾಬಾದ್ನಲ್ಲಿ ಪಂದ್ಯ:
ಈ ಬಾರಿ ಭಾರತದಲ್ಲೇ ಐಪಿಎಲ್ ನಡೆಸಬೇಕು ಎಂದು ಪಟ್ಟು ಹಿಡಿದಿರುವ ಬಿಸಿಸಿಐ ಹಲವು ಸವಾಲುಗಳು ಎದುರಿಸಲು ತಯಾರಾಗಿದೆ. ಎಲ್ಲ ಪಂದ್ಯಗಳು ಮುಂಬೈನಲ್ಲಿ ಮತ್ತು ಅಹ್ಮದಾಬಾದ್ನಲ್ಲಿ ಮಾತ್ರ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಐಪಿಎಲ್ನ ಎಲ್ಲ ಲೀಗ್ ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆದರೆ ಪ್ಲೇ ಆಫ್ ಪಂದ್ಯಗಳು ಅಹ್ಮದಾಬಾದ್ನಲ್ಲಿ ಜರುಗಲಿದೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಐಪಿಎಲ್ ಪ್ರಿಯರಿಗೆ ಸಿಕ್ಕಿದೆ. ಅದೇನೆಂದರೆ ಈ ಬಾರಿಯ ಐಪಿಎಲ್ ವೀಕ್ಷಣೆಗೆ ಶೇ. 25 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹರಾರಾಷ್ಟ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಐಪಿಎಲ್ ವೇಳೆ ಕೊರೊನಾಸಂಖ್ಯೆ ಇಳಿಮುಖವಾಗಿದ್ದರೆ ಶೇ. 25 ರಷ್ಟು ಜನರಿಗೆ ಪಂದ್ಯ ವೀಕ್ಷಿಸಲು ಅನಮತಿ ನೀಡುತ್ತೇವೆ ಎಂದು ಹೇಳಿದ್ದಾರೆ.
India vs West Indies: ಭಾರತ-ವೆಸ್ಟ್ ಇಂಡೀಸ್ ಸರಣಿ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಸಿಕ್ತು ಬಂಪರ್ ಸುದ್ದಿ: ಏನದು?
Ranji Trophy 2021-22: ರಣಜಿ ಟ್ರೋಫಿ 2022: ಫೆ. 16 ರಿಂದ ಮಾ. 5 ರವರೆಗೆ 9 ತಾಣಗಳಲ್ಲಿ ಪಂದ್ಯ ಆಯೋಜನೆ