ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL) ಬಹುಮುಖ್ಯ ಪಂದ್ಯ ನಡೆಯಲಿದೆ. ಸೋಲಿನ ಮುಖಮಾಡಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (RR vs KKR) ತಂಡ ಮುಖಾಮುಖಿ ಆಗಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೇಲೇಳಲು ಉಭಯ ತಂಡಗಳು ಗೆಲ್ಲಲೇ ಬೇಕಾದ ಒತ್ತದಡದಲ್ಲಿರುವ ಕಾರಣ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ರಾಜಸ್ಥಾನ್ ರಾಯಲ್ಸ್ (Rajastan Royals) ತಂಡ ಆಡಿದ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಎರಡರಲ್ಲಿ ಸೋಲುಂಡು ಒಟ್ಟು 6 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರನೇ ಸ್ಥಾನದಲ್ಲಿದೆ. ಆಡಿದ ಆರು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು, ಮೂರರಲ್ಲಿ ಸೋಲು ಕಂಡು ಒಟ್ಟು 6 ಅಂಕ ಹೊಂದಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದರೂ ಲಕ್ ಕೈ ಹಿಡಿಯುತ್ತಿಲ್ಲ.
ಕೋಲ್ಕತ್ತಾದ ಬ್ಯಾಟರ್‌ಗಳ ಪೈಕಿ ಆ್ಯಂಡ್ರೆ ರಸೆಲ್ ಅವರನ್ನು ಹೊರತುಪಡಿಸಿದರೆ ಉಳಿದ ಯಾರಿಗೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಸೀಸ್ ಬ್ಯಾಟರ್ ಆರನ್ ಫಿಂಚ್ ಸಿಕ್ಕ ಮೊದಲ ಅವಕಾಶವನ್ನು ಕೈಚೆಲ್ಲಿದ್ದಾರೆ. ಸ್ವತಃ ನಾಯಕ ಶ್ರೇಯಸ್ ಅಯ್ಯರ್ ಅವರೇ ಫಾರ್ಮ್‌ನಲ್ಲಿ ಇಲ್ಲದಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ನಿತೇಶ್ ರಾಣಾ, ವೆಂಕಟೇಶ್ ಅಯ್ಯರ್ ಮತ್ತು ಸ್ಯಾಮ್ ಬಿಲಿಂಗ್ಸ್ ಅವರಿಗೂ ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ. ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್ ಆರಂಭಿಕ ಮುನ್ನಡೆ ತಂದುಕೊಡುತ್ತಿದ್ದರೆ, ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಪ್ಯಾಟ್ ಕಮ್ಮಿನ್ಸ್ ಏರಿಳಿತ ಮುಂದುವರಿದಿದೆ.
ಇತ್ತ ರಾಜಸ್ಥಾನ್ ಪರ ಬ್ಯಾಟಿಂಗ್ ವಿಭಾಗದಲ್ಲಿ ಜೋಸ್ ಬಟ್ಲರ್ (272ರನ್) ಹಾಗೂ ಬೌಲಿಂಗ್‌ನಲ್ಲಿ ಯುಜ್ವೇಂದ್ರ ಚಾಹಲ್ (12 ವಿಕೆಟ್) ಹೊರತುಪಡಿಸಿ ಇತರರಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ರವಿಚಂದ್ರನ್ ಅಶ್ವಿನ್ ಫಾರ್ಮ್‌ನಲ್ಲಿಲ್ಲದೆ ಇರುವುದು ತಂಡದ ಚಿಂತೆ ಹೆಚ್ಚಿಸಿದೆ. ಈವರೆಗೆ ಅವರ ಖಾತೆಗೆ ಒಂದು ವಿಕೆಟ್ ಮಾತ್ರ ಸೇರಿದೆ. ನಾಯಕ ಸಂಜು ಸ್ಯಾಮ್ಸನ್ ಮತ್ತು ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರ ಮೇಲೆ ತಂಡ ನಿರೀಕ್ಷೆ ಇರಿಸಿಕೊಂಡಿದೆ. ಶಿಮ್ರೋನ್ ಹೆಟ್ಮೇರ್ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ. ರಿಯಾನ್ ಪರಾಗ್ ಯಾವ ವಿಭಾಗದಲ್ಲೂ ಮಿಂಚುತ್ತಿಲ್ಲ.
ಸಂಭಾವ್ಯ ಪ್ಲೇಯಿಂಗ್ XI:
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ರಾಸಿ ವ್ಯಾನ್ ಡೆರ್ ಡುಸ್ಸೆನ್.
ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಆರೋನ್ ಫಿಂಚ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಶೆಲ್ಡನ್ ಜಾಕ್ಸನ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಅಮನ್ ಖಾನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಉಭಯ ತಂಡಗಳು ಐಪಿಎಲ್ನಲ್ಲಿ ಇದುವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಕೆಕೆಆರ್ 13 ಪಂದ್ಯವನ್ನು ಗೆದ್ದರೆ ರಾಜಸ್ಥಾನ ರಾಯಲ್ಸ್ 11 ಪಂದ್ಯ ಗೆದ್ದ ಇತಿಹಾಸವಿದೆ. ಒಂದು ಪಂದ್ಯ ರದ್ದಾಗಿದೆ.
GT vs CSK: ಸಿಎಸ್ಕೆ ಗೆಲುವಿಗೆ ಕಿಲ್ಲರ್ ಆದ ಮಿಲ್ಲರ್: ಈ ಥ್ರಿಲ್ಲರ್ ಪಂದ್ಯ ಹೇಗಿತ್ತು ನೋಡಿ