IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ

| Updated By: ಝಾಹಿರ್ ಯೂಸುಫ್

Updated on: Apr 17, 2022 | 4:50 PM

IPL 2022: ಅಂತಿಮ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶಹಬಾಜ್ ಹಾಗೂ ದಿನೇಶ್ ಕಾರ್ತಿಕ್ ತಂಡದ ಮೊತ್ತವನ್ನು 20 ಓವರ್​ಗಳಲ್ಲಿ 189 ಕ್ಕೆ ತಂದು ನಿಲ್ಲಿಸಿದರು.

IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
Dinesh Karthik and Shahbaz Ahmed
Follow us on

IPL 2022:  ಐಪಿಎಲ್​ನ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC vs RCB) ವಿರುದ್ದ ಅಬ್ಬರಿಸುವ ಮೂಲಕ ಶಹಬಾಜ್ ಅಹ್ಮದ್ (Shahbaz Ahmed) ಹಾಗೂ ದಿನೇಶ್ ಕಾರ್ತಿಕ್ (Dinesh Karthik) ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅನೂಜ್ ರಾವತ್ ಶೂನ್ಯಕ್ಕೆ ಔಟಾದರೆ, ಫಾಫ್ ಡುಪ್ಲೆಸಿಸ್​ 8 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ರನೌಟ್ ಆಗಿ ಹೊರನಡೆದಿದ್ದರು. ಈ ಹಂತದಲ್ಲಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್​ವೆಲ್ 34 ಎಸೆತಗಳಲ್ಲಿ 55 ರನ್ ಬಾರಿಸಿ ನಿರ್ಗಮಿಸಿದರು.

ತಂಡದ ಮೊತ್ತ 95 ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್​ಸಿಬಿಗೆ ಈ ಹಂತದಲ್ಲಿ ಆಸರೆಯಾಗಿದ್ದು ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್. 6ನೇ ವಿಕೆಟ್​ಗೆ ಅತ್ಯುತ್ತಮ ಜೊತೆಯಾಟವಾಡಿದ ಈ ಜೋಡಿ ತಂಡದ ರನ್​ಗತಿಯನ್ನು ಹೆಚ್ಚಿಸಿದರು. ಅದರಲ್ಲೂ ದಿನೇಶ್ ಕಾರ್ತಿಕ್ ಅಕ್ಷರಶಃ ಅಬ್ಬರಿಸಿದರು. ಮುಸ್ತಫಿಜುರ್ ರೆಹಮಾನ್ ಎಸೆದ 18ನೇ ಓವರ್​ನಲ್ಲಿ 28 ರನ್​ ಬಾರಿಸುವ ಮೂಲಕ ಡಿಕೆ ಅರ್ಧಶತಕ ಪೂರೈಸಿದ್ದರು.

ಅಲ್ಲದೆ ಅಂತಿಮ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶಹಬಾಜ್ ಹಾಗೂ ದಿನೇಶ್ ಕಾರ್ತಿಕ್ ತಂಡದ ಮೊತ್ತವನ್ನು 20 ಓವರ್​ಗಳಲ್ಲಿ 189 ಕ್ಕೆ ತಂದು ನಿಲ್ಲಿಸಿದರು. ಇದರೊಂದಿಗೆ ಐಪಿಎಲ್​ನಲ್ಲಿ ಆರ್​ಸಿಬಿ ಪರ 6ನೇ ವಿಕೆಟ್​ಗೆ ಅತ್ಯಧಿಕ ರನ್​ಗಳ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಡಿಕೆ-ಶಹಬಾಜ್ ಪಾಲಾಯಿತು. ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ 6ನೇ ವಿಕೆಟ್​ಗೆ 97 ರನ್​ಗಳ ಜೊತೆಯಾಟವಾಡಿದ್ದರು. ಈ ಮೂಲಕ ಆರ್​ಸಿಬಿ ಪರ ವಿಶೇಷ ದಾಖಲೆ ಬರೆದರು.

ಅಲ್ಲದೆ ಐಪಿಎಲ್ ಇತಿಹಾಸದಲ್ಲೇ 6ನೇ ವಿಕೆಟ್​ಗೆ ಅತ್ಯಧಿಕ ರನ್​ಗಳ ಜೊತೆಯಾಟವಾಡಿದ ಮೂರನೇ ಜೋಡಿ ಎನಿಸಿಕೊಂಡಿದೆ. ಅಂದರೆ ಐಪಿಎಲ್​ನಲ್ಲಿ ಎರಡು ಬಾರಿ ಮಾತ್ರ 6ನೇ ವಿಕೆಟ್​ಗೆ 100 ರನ್​ಗಳ ಜೊತೆಯಾಟ ಮೂಡಿಬಂದಿದೆ. 2008 ರಲ್ಲಿ ಕೆಕೆಆರ್ ತಂಡದ ಡೇವಿಡ್ ಹಸ್ಸಿ ಹಾಗೂ ವೃದ್ದಿಮಾನ್ ಸಾಹಾ 104 ರನ್​ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದರು.

ಇದಾದ ಬಳಿಕ 2012 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅಂಬಾಟಿ ರಾಯುಡು ಹಾಗೂ ಕೀರನ್ ಪೊಲಾರ್ಡ್​ ಆರ್​ಸಿಬಿ ವಿರುದ್ದ 6ನೇ ವಿಕೆಟ್​ಗೆ 122 ರನ್​ಗಳ ಜೊತೆಯಾಟವಾಡಿ ಹೊಸ ಇತಿಹಾಸ ನಿರ್ಮಿಸಿದ್ದರು. ಇದೀಗ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 97 ರನ್​ಗಳ ಜೊತೆಯಾಟವಾಡುವ ಮೂಲಕ 6ನೇ ವಿಕೆಟ್​ಗೆ ಅತ್ಯಧಿಕ ರನ್​ಗಳಿಸಿದ 3ನೇ ಜೋಡಿ ಎನಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 34 ಎಸೆತಗಳಲ್ಲಿ 5 ಸಿಕ್ಸ್, 5 ಫೋರ್​ನೊಂದಿಗೆ 66 ರನ್​ಗಳಿಸಿದ್ದರು. ಹಾಗೆಯೇ ಉತ್ತಮ ಸಾಥ್ ನೀಡಿದ ಶಹಬಾಜ್ 21 ಎಸೆತಗಳಲ್ಲಿ 3 ಫೋರ್, ಒಂದು ಸಿಕ್ಸ್​ನೊಂದಿಗೆ 32 ರನ್ ಕಲೆಹಾಕಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಮೊಹಮ್ಮದ್ ಸಿರಾಜ್

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ), ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

Published On - 11:06 pm, Sat, 16 April 22