20ನೇ ಓವರ್ನ ಕೊನೆಯ 5 ಎಸೆತದಲ್ಲಿ 5 ಸಿಕ್ಸರ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟ ಪ್ರಸಂಗ ಐಪಿಎಲ್ ಇರಲಿ ಪ್ರಾಯಶಃ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ನಡೆದಿರಲಿಲ್ಲ ಎನಿಸುತ್ತದೆ. ಆದರೆ 16ನೇ ಆವೃತ್ತಿಯ ಐಪಿಎಲ್ನಲ್ಲಿ (IPL 2023) ಈ ಘಟನೆ ನಡೆದುಹೋಗಿದೆ. ವಿಶ್ವ ಕ್ರಿಕೆಟ್ ಆಳಿದ್ದ ಘಟಾನುಘಟಿ ಕ್ರಿಕೆಟರ್ಗಳೆ ಮಾಡದ ಸಾಧನೆಯನ್ನು ಕೆಕೆಆರ್ ತಂಡದ ರಿಂಕು ಸಿಂಗ್ (Rinku Singh) ಎಂಬ ಯುವ ಬ್ಯಾಟರ್ ಮಾಡಿ ಮುಗಿಸಿದ್ದ. ಇದರಿಂದ ಆ ಯುವ ಬ್ಯಾಟರ್ನ ಕ್ರಿಕೆಟ್ ಬದುಕಿಗೆ ಹೊಸ ತಿರುವೇನೋ ಸಿಕ್ಕಿತು. ಆದರೆ ಈ ಯುವ ಬ್ಯಾಟರ್ ಎದುರು 5 ಸಿಕ್ಸರ್ ಹೊಡೆಸಿಕೊಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ಬೌಲರ್ ಯಶ್ ದಯಾಳ್ (Yash Dayal) ಸ್ಥಿತಿ ಹೇಳತೀರದಾಗಿದೆ. ಆ ಪಂದ್ಯದ ಬಳಿಕ ತಂಡದಿಂದಲೇ ನಾಪತ್ತೆಯಾಗಿರುವ ದಯಾಳ್ ಅವರ ಆರೋಗ್ಯವೂ ಕೈಕೊಟ್ಟಿದ್ದು, ಕೆಲವೇ ದಿನಗಳಲ್ಲಿ 7 ರಿಂದ 8 ಕೆಜಿ ತೂಕ ಕಳೆದುಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸ್ವತಃ ಈ ವಿಚಾರವನ್ನು ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರೇ ಹೊರಹಾಕಿದ್ದಾರೆ.
ವಾಸ್ತವವಾಗಿ ಏ. 25 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ನಂತರ ಮಾತನಾಡಿದ್ದ ಹಾರ್ದಿಕ್ ಪಾಂಡ್ಯ ಯಶ್ ದಯಾಳ್ ಅಲಭ್ಯತೆಯ ಬಗ್ಗೆ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಪಾಂಡ್ಯ, ಆ ಪಂದ್ಯದ ಬಳಿಕ (ಕೆಕೆಆರ್ ವಿರುದ್ಧದ) ಯಶ್ ದಯಾಳ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ ಅವರು ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಯಶ್ ದಯಾಳ್ ಜ್ವರದಿಂದ ನರಳುತ್ತಿದ್ದು, ಅವರ ತೂಕ ಕೂಡ 7 ರಿಂದ 8 ಕೆಜಿ ಕಡಿಮೆಯಾಗಿದೆ ಎಂದು ಪಾಂಡ್ಯ ಮಾಹಿತಿ ನೀಡಿದ್ದಾರೆ.
Rishabh Pant: ಟೀಂ ಇಂಡಿಯಾಕ್ಕೆ ಆಘಾತ; ಏಷ್ಯಾಕಪ್ ಜೊತೆಗೆ ವಿಶ್ವಕಪ್ನಿಂದಲೂ ರಿಷಬ್ ಪಂತ್ ಔಟ್..!
ಕೆಕೆಆರ್ ವಿರುದ್ಧದ ಆ ಪಂದ್ಯದ ನಂತರ, ಯಶ್ ದಯಾಳ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಲಿಸ್ಟ್ನಲ್ಲೂ ದಯಾಳ್ ಹೆಸರು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಯಶ್ ದಯಾಳ್ ಎಲ್ಲಿ ಹೋಗಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಹಾರ್ದಿಕ್ ಪಾಂಡ್ಯ ಮತ್ತು ಗುಜರಾತ್ ತಂಡದ ನಿರ್ವಹಣೆ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು . ಯಶ್ ದಯಾಳ್ ಅವರ ಮೇಲಿನ ನಂಬಿಕೆಯನ್ನು ತಂಡ ಕಳೆದುಕೊಂಡಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಹಾರ್ದಿಕ್ ಪಾಂಡ್ಯ ಹೇಳಿದ್ದನ್ನು ನೋಡಿದರೆ ಅದೊಂದು ಓವರ್ ಯಶ್ ದಯಾಳ್ ಮೇಲೆ ಎಷ್ಟೊಂದು ಪರಿಣಾಮ ಬೀರಿದೆ ಎಂಬುದನ್ನು ಕಾಣಬಹುದಾಗಿದೆ. ಸದ್ಯ ಯಶ್ ದಯಾಳ್ ಶೀಘ್ರದಲ್ಲೇ ಗುಣಮುಖರಾಗಿ, ಮೈದಾನಕ್ಕೆ ಬೇಗ ಹಿಂದಿರುಗಲಿ ಎಂದು ಕ್ರಿಕೆಟ್ ಅಭಿಮಾನಿಗಳು ಆಶಿಸುತ್ತಿದ್ದಾರೆ.
ವಾಸ್ತವವಾಗಿ ಗುಜರಾತ್ ನೀಡಿದ್ದ 205 ರನ್ಗಳ ಗುರಿ ಬೆನ್ನಟ್ಟಿದ್ದ ಕೆಕೆಆರ್ 16.3 ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸೋಲಿನ ಸುಳಿಯಲ್ಲಿತ್ತು. ರಿಂಕಿ ಸಿಂಗ್ ಹೋರಾಟ ನಡೆಸಿ ಕೊನೆಯ ಓವರ್ನ 6 ಎಸೆತದಲ್ಲಿ ಗೆಲುವಿಗೆ 29 ರನ್ ಬೇಕಾಗುವಂತೆ ಮಾಡಿದರು. ಇಲ್ಲಿ ಕೆಕೆಆರ್ಗೆ ಗೆಲುವು ಅಸಾಧ್ಯ ಎಂದೇ ನಂಬಲಾಗುತ್ತು. ಆದರೆ, ಯಶ್ ದಯಾಳ್ ಬೌಲ್ ಮಾಡಿದ 20ನೇ ಓವರ್ನ ಮೊದಲ ಬಾಲ್ಗೆ ಉಮೇಶ್ ಯಾದವ್ ಒಂದು ರನ್ ತೆಗೆದು ರಿಂಕುಗೆ ಸ್ಟ್ರೈಕ್ ಬಿಟ್ಟು ಕೊಟ್ಟರು. ಆ ಹಂತದಲ್ಲಿ ಕೆಕೆಆರ್ ಗೆಲುವಿಗೆ 5 ಬಾಲ್ನಲ್ಲಿ 28 ರನ್ ಅವಶ್ಯಕತೆ ಇತ್ತು. ಆದರೆ ಮಿಕ್ಕ ಐದೂ ಎಸೆತವನ್ನೂ ರಿಂಕು ಸಿಕ್ಸರ್ಗಟ್ಟಿ ನೈಟ್‌ರೈಡರ್ಸ್‌ಗೆ 3 ವಿಕೆಟ್ಗಳ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Wed, 26 April 23