IPL 2024: ಆರ್​ಸಿಬಿ- ಸಿಎಸ್​ಕೆ ಪಂದ್ಯದ ಟಿಕೆಟ್ ಬೇಕಾ? ಎಚ್ಚರಿಕೆ..!; 3 ಲಕ್ಷ ಕಳೆದುಕೊಂಡ ಬೆಂಗಳೂರಿನ ಅಭಿಮಾನಿ

|

Updated on: May 16, 2024 | 10:31 PM

IPL 2024 Ticket Scam: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಈ ಪಂದ್ಯದ ಟಿಕೆಟ್ ಬಹುತೇಕ ಈಗಾಗಲೇ ಮಾರಾಟವಾಗಿವೆ. ಕಾಳಸಂತೆಯಲ್ಲಿ ಈ ಪಂದ್ಯದ ಟಿಕೆಟ್​ಗೆ ಭರ್ಜರಿ ಬೇಡಿಕೆಯುಂಟಾಗಿದೆ. ಈ ಬೇಡಿಯನ್ನು ಆನ್‌ಲೈನ್‌ ವಂಚಕರು ಸರಿಯಾಗಿಯೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಬೆಂಗಳೂರಿನ ಕ್ರಿಕೆಟ್ ಪ್ರಿಯನೊಬ್ಬ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

IPL 2024: ಆರ್​ಸಿಬಿ- ಸಿಎಸ್​ಕೆ ಪಂದ್ಯದ ಟಿಕೆಟ್ ಬೇಕಾ? ಎಚ್ಚರಿಕೆ..!; 3 ಲಕ್ಷ ಕಳೆದುಕೊಂಡ ಬೆಂಗಳೂರಿನ ಅಭಿಮಾನಿ
ಆರ್​ಸಿಬಿ- ಸಿಎಸ್​ಕೆ
Follow us on

17ನೇ ಆವೃತ್ತಿಯ ಐಪಿಎಲ್​ನ (IPL 2024) ಫೈನಲ್ ಪಂದ್ಯ ಇದೇ ಮೇ 26 ರಂದು ನಡೆಯಲ್ಲಿದೆ. ಈ ಪಂದ್ಯ ನಡೆಯಲು ಇನ್ನು 10 ದಿನಗಳಿವೆ. ಆದರೂ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಇದೇ ಮೇ 18ರಂದು ನಡೆಯಲ್ಲಿರುವ ಸಿಎಸ್​ಕೆ ವಿರುದ್ಧದ (RCB vs CSK) ಲೀಗ್​ ಪಂದ್ಯವೇ ಫೈನಲ್ ಪಂದ್ಯದಂತ್ತಾಗಿದೆ. ಆರ್​ಸಿಬಿ ಅಭಿಮಾನಿಗಳಿಗೆ ಮಾತ್ರವಲ್ಲ, ಸಿಎಸ್​ಕೆ ಅಭಿಮಾನಿಗಳಿಗೂ ಇದು ಫೈನಲ್​ ಪಂದ್ಯವಿದ್ದಂತೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಈ ಪಂದ್ಯದ ಟಿಕೆಟ್ ಬಹುತೇಕ ಈಗಾಗಲೇ ಮಾರಾಟವಾಗಿವೆ. ಕಾಳಸಂತೆಯಲ್ಲಿ ಈ ಪಂದ್ಯದ ಟಿಕೆಟ್​ಗೆ ಭರ್ಜರಿ ಬೇಡಿಕೆಯುಂಟಾಗಿದೆ. ಈ ಬೇಡಿಯನ್ನು ಆನ್‌ಲೈನ್‌ ವಂಚಕರು ಸರಿಯಾಗಿಯೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಬೆಂಗಳೂರಿನ ಕ್ರಿಕೆಟ್ ಪ್ರಿಯನೊಬ್ಬ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಈ ರೀತಿಯ ಸೈಬರ್ ಕ್ರೈಂಗೆ ಬಲಿಯಾಗಿರುವ ಅಭಿಮಾನಿ ಬೆಂಗಳೂರಿನ ಸುಧಾಮ ನಗರದ ನಿವಾಸಿ ಎಂದು ವರದಿಯಾಗಿದೆ. ಟಿಕೆಟ್​ನ ಆಸೆಗೆ ಬಿದ್ದು ಹಂತಹಂತವಾಗಿ ಈತ ಬರೋಬ್ಬರಿ 3 ಲಕ್ಷ ರೂಗಳನ್ನು ಕಳೆದುಕೊಂಡಿದ್ದು, ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಿಇಎನ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾನೆ. ಅಲ್ಲದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ವಂಚನೆಗೊಳಗಾಗಿರುವ ವ್ಯಕ್ತಿ ಮೇ 11ರ ಬೆಳಿಗ್ಗೆ 10 ರಿಂದ ಮೇ 12 ರ ರಾತ್ರಿ 11 ರ ನಡುವೆ ಆನ್​ಲೈನ್ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾನೆ. ಈತ ಮೇ 18 ರಂದು ನಡೆಯಲ್ಲಿರುವ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದ ಟಿಕೆಟ್​ಗಾಗಿ ಹುಡುಕಾಟ ಮಾಡಿದ್ದಾನೆ. ಕಾಳಸಂತೆಯಲ್ಲಿ ಟಿಕೆಟ್ ಸಿಗುತ್ತವೆ ಎಂಬ ಮಾಹಿತಿ ಈತನಿಗೆ ಸಿಕ್ಕಿದೆ.

ಇನ್‌ಸ್ಟಾಗ್ರಾಮ್​ನಲ್ಲಿ ಗಾಳ

ipl_2024_tickets__24 ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದ ಟಿಕೆಟ್ ಸಿಗಲಿದೆ ಎಂಬ ಜಾಹೀರಾತನ್ನು ನೋಡಿದ್ದಾನೆ. ಕೂಡಲೇ ಈ ಇನ್​ಸ್ಟಾಗ್ರಾಮ್ ಖಾತಾದರರೊಂದಿಗೆ ಚಾಟಿಂಗ್ ಆರಂಭಿಸಿದ್ದಾನೆ. ನಮ್ಮ ಬಳಿ ಪಂದ್ಯದ ಟಿಕೆಟ್ ಇರುವುದಾಗಿ ವಂಚಕ ಹೇಳಿದ್ದಾನೆ. ಅಲ್ಲದೆ ತನ್ನನ್ನು ಪದ್ಮ ಸಿನ್ಹಾ ವಿಜಯ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಹಾಗೆಯೇ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡಲು ಅಧಿಕೃತ ಫ್ರಾಂಚೈಸ್ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಇದು ಸಾಲದೆಂಬಂತೆ ವಂಚನೆಗೊಳಗಾಗಿರುವ ವ್ಯಕ್ತಿಯನ್ನು ನಂಬಿಸುವ ಸಲುವಾಗಿ, ಆನ್‌ಲೈನ್‌ ವಂಚಕ ಆಧಾರ್ ಕಾರ್ಡ್‌ನ ಫೋಟೋ ಮತ್ತು ಮೊಬೈಲ್ ನಂಬರ್ 9155026674 ಅನ್ನು ಕಳುಹಿಸಿದ್ದಾನೆ. ಹಾಗೆಯೇ ಹಣ ಪಾವತಿಯಾದ ನಂತರ ಇ-ಟಿಕೆಟ್‌ಗಳನ್ನು ಕಳುಹಿಸುವುದಾಗಿ ಹೇಳಿದ್ದಾನೆ.

ಹಂತಹಂತವಾಗಿ 3 ಲಕ್ಷ ಗುಳುಂ

ವಂಚನೆಗೊಳಗಾಗಿರುವ ವ್ಯಕ್ತಿ ಮೂರು ಟಿಕೆಟ್‌ಗಳಿಗೆ ತಲಾ 2,300 ರೂ.ಗಳಂತೆ ಆನ್‌ಲೈನ್‌ನಲ್ಲಿ 7,900 ರೂ.ಗಳನ್ನು ಕಳುಹಿಸಿದ್ದಾನೆ. ಆದರೆ ಹಣ ಕಳುಹಿಸಿದ ಬಳಿಕವೂ ಇ-ಟಿಕೆಟ್‌ಗಳು ಸಿಕ್ಕಿಲ್ಲ. ಕೂಡಲೆ ವಂಚನೆಗೊಳಗಾದ ವ್ಯಕ್ತಿ, ವಂಚಕನಿಗೆ ಫೋನ್ ಮಾಡಿದ್ದಾನೆ. ವಂಚಕ, ಟಿಕೆಟ್ ಬೆಲೆ 7,900 ರೂ ಬದಲು 67000 ರೂ.ಗೆ ಏರಿಕೆಯಾಗಿದೆ. ಮಿಕ್ಕ ಹಣವನ್ನು ಕೂಡಲೇ ಕಳುಹಿಸುವಂತೆ ಹೇಳಿದ್ದಾನೆ. ಟಿಕೆಟ್​ನ ಆಸೆಗಾಗಿ ವಂಚನೆಗೊಳಗಾದ ವ್ಯಕ್ತಿ ಮತ್ತೆ 67,000 ರೂ.ಗಳನ್ನು ವರ್ಗಾವಣೆ ಮಾಡಿದ್ದಾನೆ. ಅದಾಗ್ಯೂ ಆತನಿಗೆ ಇ-ಟಿಕೆಟ್‌ ಸಿಕ್ಕಿಲ್ಲ. ಆ ನಂತರವೂ ವಂಚಕ ನಾನಾ ಕಾರಣಗಳನ್ನು ಹೇಳಿದ್ದಲ್ಲದೆ, ಉಳಿದ ಹಣವನ್ನು ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದಾನೆ. ವಂಚಕನನ್ನು ಇನ್ನಷ್ಟು ನಂಬಿದ ವಂಚನೆಗೊಳಗಾದ ವ್ಯಕ್ತಿ ಮುಂದಿನ ಎರಡು ದಿನಗಳಲ್ಲಿ 3 ಲಕ್ಷ ರೂ. ಹಣ ಕಳುಹಿಸಿದ್ದಾನೆ. ಆ ನಂತರವೂ ಇ- ಟಿಕೆಟ್ ಕಳುಹಿಸದ ಆನ್‌ಲೈನ್‌ ವಂಚಕ ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಕೊನೆಗೆ ತಾನು ಆನ್‌ಲೈನ್‌ ವಂಚನೆಗೆ ಬಲಿಯಾಗಿರುವುದನ್ನು ಅರಿತುಕೊಂಡ ಆ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಪೊಲೀಸರ ಜಾಗೃತಿ

ಐಪಿಸಿ ಸೆಕ್ಷನ್ 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳ ಮಾರಾಟವನ್ನು ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಕ್ರೀಡಾಂಗಣದಲ್ಲಿರುವ ಕೌಂಟರ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 pm, Thu, 16 May 24