IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಗೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ತಂಡವು ತನ್ನ ನಾಯಕನನ್ನು ಬದಲಿಸಿದೆ. ರೋಹಿತ್ ಶರ್ಮಾ (Rohit Sharma) ಬದಲಿಗೆ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಇತ್ತ ಮುಂಬೈ ಇಂಡಿಯನ್ಸ್ ತಂಡವನ್ನು 6 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಅವರನ್ನು ಐಪಿಎಲ್ನ ಯಶಸ್ವಿ ನಾಯಕ ಎಂದು ವರ್ಣಿಸಲಾಗಿತ್ತು. ಆದರೆ ಫ್ರಾಂಚೈಸಿ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ಈಗಲೂ ಮುಂಚೂಣಿಯಲ್ಲಿರುವುದು ಮಹೇಂದ್ರ ಸಿಂಗ್ ಧೋನಿ ಎಂಬುದು ವಿಶೇಷ.
ಇದಲ್ಲದೆ ಪಂದ್ಯಗಳನ್ನು ಮುನ್ನಡೆಸಿದ ಲೆಕ್ಕಾಚಾರದಲ್ಲೂ ರೋಹಿತ್ ಶರ್ಮಾಗಿಂತ ಮಹೇಂದ್ರ ಸಿಂಗ್ ಧೋನಿ ಮುಂದಿದ್ದಾರೆ. ಹಿಟ್ಮ್ಯಾನ್ 158 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ 87 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, 67 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 226 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ 133 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಎಂಎಸ್ಡಿ ನಾಯಕತ್ವದಲ್ಲಿ ಸಿಎಸ್ಕೆ ಸೋತಿರುವುದು 91 ಬಾರಿ ಮಾತ್ರ.
ಇದನ್ನೂ ಓದಿ: IPL 2024 Auction: ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 333 ಆಟಗಾರರ ಪಟ್ಟಿ ಇಲ್ಲಿದೆ
ಐಪಿಎಲ್ನಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅತ್ತ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನಾಯಕತ್ವದಲ್ಲಿ 5 ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಿಎಸ್ಕೆ 2 ಬಾರಿ ವಿನ್ನರ್ ಆಗಿ ಹೊರಹೊಮ್ಮಿದೆ. ಅತ್ತ ಮುಂಬೈ ಇಂಡಿಯನ್ಸ್ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಅಂದರೆ ಇಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಟ್ಟು 7 ಪ್ರಶಸ್ತಿ ಪಡೆದಿದ್ದರೆ, ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ 6 ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.