ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 65ನೇ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಸೋಲುಣಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೇವಲ 4 ರನ್ ಬಾರಿಸಿ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದ್ದರು.
ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 18 ರನ್ಗಳಿಸಿ ನಿರ್ಗಮಿಸಿದರು. ಹಾಗೆಯೇ ಜೋಸ್ ಬಟ್ಲರ್ ಬದಲಿಗೆ ಆರಂಭಿಕನಾಗಿ ಸ್ಥಾನ ಪಡೆದ ಟಾಮ್ ಕೊಹ್ಲರ್ (18) ಮೋಡಿ ಮಾಡುವಲ್ಲಿ ವಿಫಲರಾದರು.
ಈ ಹಂತದಲ್ಲಿ ಜೊತೆಗೂಡಿದ ರಿಯಾನ್ ಪರಾಗ್ ಹಾಗೂ ರವಿಚಂದ್ರನ್ ಅಶ್ವಿನ್ ಅರ್ಧಶತಕದ ಜೊತೆಯಾಟವಾಡಿದರು. ಆದರೆ 28 ರನ್ಗಳಿಸಿ ಅಶ್ವಿನ್ ಕೂಡ ನಿರ್ಗಮಿಸಿದರು.
ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ರಿಯಾನ್ ಪರಾಗ್ 34 ಎಸೆತಗಳಲ್ಲಿ 6 ಫೋರ್ಗಳೊಂದಿಗೆ 48 ರನ್ ಬಾರಿಸಿ ಕೊನೆಯ ಓವರ್ನಲ್ಲಿ ಔಟಾದರು. ಇನ್ನು ಅಂತಿಮ ಓವರ್ಗಳ ವೇಳೆ ಟ್ರೆಂಟ್ ಬೌಲ್ಟ್ 12 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿತು.
145 ರನ್ಗಳ ಸುಲಭ ಗುರಿ ಪಡೆದ ಪಂಜಾಬ್ ಕಿಂಗ್ಸ್ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ ಓವರ್ನಲ್ಲೇ ಪ್ರಭ್‌ಸಿಮ್ರಾನ್ ಸಿಂಗ್ (4) ವಿಕೆಟ್ ಕಬಳಿಸಿ ಟ್ರೆಂಟ್ ಬೌಲ್ಟ್ ಮೊದಲ ಯಶಸ್ಸು ತಂದುಕೊಟ್ಟರು.
ಈ ಹಂತದಲ್ಲಿ ಕಣಕ್ಕಿಳಿದ ರೈಲಿ ರೊಸೊವ್ 13 ಎಸೆತಗಳಲ್ಲಿ 5 ಫೋರ್ಗಳೊಂದಿಗೆ 22 ರನ್ ಬಾರಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಶಶಾಂಕ್ ಸಿಂಗ್ (0) ವಿಕೆಟ್ ಪಡೆಯುವಲ್ಲಿ ಅವೇಶ್ ಖಾನ್ ಯಶಸ್ವಿಯಾದರು. ಇನ್ನು ಜಾನಿ ಬೈರ್‌ಸ್ಟೋವ್ (14) ಚಹಲ್ ಸ್ಪಿನ್ ಮೋಡಿಗೆ ಔಟಾದರು.
ಈ ಹಂತದಲ್ಲಿ ಜೊತೆಯಾದ ಸ್ಯಾಮ್ ಕರನ್ ಹಾಗೂ ಜಿತೇಶ್ ಶರ್ಮಾ 63 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಪರಿಣಾಮ ಅಂತಿಮ 5 ಓವರ್ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೇವಲ 42 ರನ್ಗಳ ಅವಶ್ಯಕತೆಯಿತ್ತು.
ಈ ವೇಳೆ ಬಿರುಸಿನ ಹೊಡೆತಕ್ಕೆ ಮುಂದಾಗಿ ಜಿತೇಶ್ ಶರ್ಮಾ (22) ವಿಕೆಟ್ ಕೈಚೆಲ್ಲಿದರು. ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಸ್ಯಾಮ್ ಕರನ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಅಜೇಯ 63 ರನ್ ಬಾರಿಸುವ ಮೂಲಕ ಸ್ಯಾಮ್ ಕರನ್ 18.5 ಓವರ್ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ 5 ವಿಕೆಟ್ಗಳ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ 10ನೇ ಸ್ಥಾನದಲ್ಲಿತ್ತು. ಇದೀಗ ಒಂದು ಸ್ಥಾನ ಜಿಗಿತ ಕಾಣುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ಯುಜ್ವೇಂದ್ರ ಚಹಲ್.
ಇದನ್ನೂ ಓದಿ: IPL 2024: RCB vs CSK ಪಂದ್ಯಕ್ಕೆ ಐವರು ಆಟಗಾರರು ಅಲಭ್ಯ..!
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್‌ಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋವ್, ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ, ಸ್ಯಾಮ್ ಕರನ್ (ನಾಯಕ), ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ನಾಥನ್ ಎಲ್ಲಿಸ್, ರಾಹುಲ್ ಚಹರ್, ಅರ್ಶ್‌ದೀಪ್ ಸಿಂಗ್.
Published On - 11:17 pm, Wed, 15 May 24