IPL 2024: ರಿಷಬ್ ಪಂತ್​ಗೆ ಭಾವನಾತ್ಮಕ ಸ್ವಾಗತ ಕೋರಿದ ಡೆಲ್ಲಿ ಕ್ಯಾಪಿಟಲ್ಸ್; ವಿಡಿಯೋ

|

Updated on: Mar 13, 2024 | 6:45 PM

IPL 2024, Rishabh Pant: ಕಾರು ಅಪಘಾತಕ್ಕೀಡಾಗಿ ವರ್ಷದಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಬ್​ ಪಂತ್ ಪೂರ್ಣ ಫಿಟ್ ಆಗಿದ್ದಾರೆ ಎಂದು ಎನ್​ಸಿಎ ವರದಿ ನೀಡಿದೆ. ಎನ್​ಸಿಎನಿಂದ ವರದಿ ಸಿಕ್ಕ ಬಳಿಕ ಅತೀವ ಸಂತಸದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ತನ್ನ ತಂಡದ ನಾಯಕನನ್ನು ಅದ್ಧೂರಿಯಾಗಿ ತನ್ನ ತಂಡಕ್ಕೆ ಸ್ವಾಗತ ಕೋರಿದೆ.

IPL 2024: ರಿಷಬ್ ಪಂತ್​ಗೆ ಭಾವನಾತ್ಮಕ ಸ್ವಾಗತ ಕೋರಿದ ಡೆಲ್ಲಿ ಕ್ಯಾಪಿಟಲ್ಸ್; ವಿಡಿಯೋ
ರಿಷಬ್ ಪಂತ್
Follow us on

17ನೇ ಆವೃತ್ತಿಯ ಐಪಿಎಲ್ (IPL 2024) ಆರಂಭಕ್ಕೆ ಇನ್ನು 10 ದಿನಗಳಿಗೂ ಕಡಿಮೆ ಸಮಯ ಉಳಿದಿದೆ. ಮಾರ್ಚ್​ 22 ರಿಂದ ಆರಂಭವಾಗಲಿರುವ ಐಪಿಎಲ್​ಗೆ ಎಲ್ಲಾ ತಂಡಗಳು ಈಗಾಗಲೇ ತಯಾರಿ ಆರಂಭಿಸಿವೆ. ಅದರಂತೆ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟಲು ಶ್ರಮಿಸುತ್ತಿದೆ. ಈ ನಡುವೆ ತಂಡಕ್ಕೆ ಸಂತಸದ ಸುದ್ದಿಯೊಂದು ಸಿಕ್ಕಿದ್ದು, ಕಾರು ಅಪಘಾತಕ್ಕೀಡಾಗಿ ವರ್ಷದಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಬ್​ ಪಂತ್ (Rishabh Pant) ಪೂರ್ಣ ಫಿಟ್ ಆಗಿದ್ದಾರೆ ಎಂದು ಎನ್​ಸಿಎ ವರದಿ ನೀಡಿದೆ. ಎನ್​ಸಿಎನಿಂದ ವರದಿ ಸಿಕ್ಕ ಬಳಿಕ ಅತೀವ ಸಂತಸದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಫ್ರಾಂಚೈಸ್ ತನ್ನ ತಂಡದ ನಾಯಕನನ್ನು ಅದ್ಧೂರಿಯಾಗಿ ತನ್ನ ತಂಡಕ್ಕೆ ಸ್ವಾಗತ ಕೋರಿದೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ತುಂಬಾ ಮಿಸ್ ಮಾಡಿಕೊಂಡಿದ್ದೇವೆ

ರಿಷಬ್​ ಪಂತ್​ರನ್ನು ಮತ್ತೆ ತಂಡಕ್ಕೆ ಕರೆತರುವ ಕೆಲಸವನ್ನು ಡೆಲ್ಲಿ ಫ್ರಾಂಚೈಸಿ ಪುಟ್ಟ ಬಾಲಕನಿಗೆ ನೀಡಿದೆ. ಅದರಂತೆ ಡೆಲ್ಲಿ ತಂಡದ ಜೆರ್ಸಿ ಹಿಡಿದು ಪಂತ್ ಮನೆಯತ್ತ ಹೆಜ್ಜೆಹಾಕುವ ಈ ಪೋರ, ಪಂತ್​ಗೆ ತಂಡದ ಜೆರ್ಸಿ ನೀಡಿ, ನಿಮ್ಮನ್ನು ನಾವು ತುಂಬಾ ಮಿಸ್ ಮಾಡಿಕೊಂಡಿದ್ದೇವೆ ರಿಷಬ್ ಅಣ್ಣ ಎಂದಿದ್ದಾನೆ. ಆ ಪುಟ್ಟ ಪೋರನಿಂದ ಜೆರ್ಸಿ ಇರುವ ಉಡುಗೊರೆ ಬಾಕ್ಸ್ ಪಡೆದ ಪಂತ್, ಅದನ್ನು ತೆರೆದು ಅದರಲ್ಲಿದ್ದ ಜೆರ್ಸಿಯನ್ನು ಧರಿಸಿಕೊಂಡು ಮತ್ತೊಮ್ಮೆ ಘರ್ಜಿಸಲು ನಾನು ಸಿದ್ಧವಾಗಿದ್ದೇನೆ ಎಂದಿದ್ದಾರೆ.

ಪವಾಡ ಎಂದ ಬಿಸಿಸಿಐ

ಇನ್ನು ಪಂತ್ ಗಾಯದ ಬಗ್ಗೆ ಹಾಗೂ ಅವರ ಚೇತರಿಕೆಯ ಬಗ್ಗೆ ಬಿಸಿಸಿಐ ಕೂಡ ವಿಡಿಯೋವೊಂದನ್ನು ಹರಿಬಿಟ್ಟಿದೆ. ಅದರಲ್ಲಿ ಎನ್​ಸಿಎ ಫಿಸಿಯೋ ಮತ್ತು ವೈದ್ಯರು ಪಂತ್‌ಗೆ ಯಾವ ರೀತಿಯ ಗಾಯಗಳಾಗಿದ್ದವು ಎಂಬುದನ್ನು ವಿವರಿಸುತ್ತಿದ್ದಾರೆ. ಅದರಂತೆ ಪಂತ್ ಕಾಲಿನ ಎಲ್ಲಾ ಲಿಗಮೆಂಟ್​ಗಳು ಮುರಿದು ಹೋಗಿದ್ದವು ಎಂಬುದು ಬೆಳಕಿಗೆ ಬಂದಿದೆ. ವೈದ್ಯರ ಕಠಿಣ ಪರಿಶ್ರಮ ಮತ್ತು ಪಂತ್ ಅವರ ಇಚ್ಛಾಶಕ್ತಿ ಅದ್ಭುತಗಳನ್ನು ಮಾಡಿದೆ ಎಂದಿದ್ದಾರೆ. ಅಲ್ಲದೆ ರಿಷಬ್ ಪಂತ್ ಕೂಡ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದು, ಇಷ್ಟೆಲ್ಲ ನೋವುಗಳನ್ನು ಅನುಭವಿಸಿದ ನಂತರ ಇದೀಗ ಮತ್ತೆ ಕ್ರಿಕೆಟ್ ಆಡುತ್ತಿರುವುದು ಯಾವುದೇ ಮ್ಯಾಜಿಕ್‌ಗಿಂತ ಕಡಿಮೆಯಿಲ್ಲ ಎಂದಿದ್ದಾರೆ.

ಟಿ20 ವಿಶ್ವಕಪ್ ಆಡ್ತಾರಾ ಪಂತ್?

ಇನ್ನು 2022 ರ ಡಿಸೆಂಬರ್ ನಂತರ ಮೊದಲ ಬಾರಿಗೆ ಕ್ರಿಕೆಟ್​ ಕಣಕ್ಕೆ ಕಾಲಿಡುತ್ತಿರುವ ರಿಷಬ್ ಪಂತ್ ಮಾರ್ಚ್ 23 ರಂದು ಮೊಹಾಲಿಯಲ್ಲಿ ನಡೆಯಲ್ಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇಡೀ ಟೂರ್ನಿಯಲ್ಲಿ ಪಂತ್ ಉತ್ತಮ ಪ್ರದರ್ಶನ ನೀಡಿದರೆ, ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗಲಿದೆ ಎಂದು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೇ ಹೇಳಿದ್ದಾರೆ. ಹೀಗಾಗಿ ಪಂತ್​ ಐಪಿಎಲ್​ನಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Wed, 13 March 24