- Kannada News Photo gallery Cricket photos BCCI secretary Jay Shah drops major update on Mohammed Shami and KL Rahul
Mohammed Shami: ಐಪಿಎಲ್ ಜೊತೆಗೆ ಟಿ20 ವಿಶ್ವಕಪ್ನಿಂದಲೂ ಮೊಹಮ್ಮದ್ ಶಮಿ ಔಟ್..!
Mohammed Shami: ಜೂನ್ ತಿಂಗಳಿಂದ ಚುಟುಕು ವಿಶ್ವ ಸಮರ ಆರಂಭವಾಗಲಿದ್ದು, ಅದಕ್ಕೂ ಮುನ್ನ ನಡೆಯುವ ಐಪಿಎಲ್, ಟೀಂ ಇಂಡಿಯಾದ ವಿಶ್ವಕಪ್ ತಯಾರಿಗೆ ಸಹಾಯಕವಾಗಲಿದೆ. ಆದರೆ ಅದಕ್ಕೂ ಮುನ್ನ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದ್ದು, ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಟಿ20 ವಿಶ್ವಕಪ್ನಿಂದಲೂ ಹೊರಬಿದ್ದಿದ್ದಾರೆ.
Updated on: Mar 11, 2024 | 5:19 PM

ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡುವ ಐಪಿಎಲ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮಾರ್ಚ್ 22 ರಿಂದ ಆರಂಭವಾಗುವ ಈ ಮಿಲಿಯನ್ ಡಾಲರ್ ಟೂರ್ನಿ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆ ನಂತರ ಟಿ20 ವಿಶ್ವಕಪ್ ಜ್ವರ ಕಾವೇರಲಿದೆ.

ಜೂನ್ ತಿಂಗಳಿಂದ ಚುಟುಕು ವಿಶ್ವ ಸಮರ ಆರಂಭವಾಗಲಿದ್ದು, ಅದಕ್ಕೂ ಮುನ್ನ ನಡೆಯುವ ಐಪಿಎಲ್, ಟೀಂ ಇಂಡಿಯಾದ ವಿಶ್ವಕಪ್ ತಯಾರಿಗೆ ಸಹಾಯಕವಾಗಲಿದೆ. ಆದರೆ ಅದಕ್ಕೂ ಮುನ್ನ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದ್ದು, ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ.

2023 ರ ಏಕದಿನ ವಿಶ್ವಕಪ್ ಬಳಿಕ ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಸದ್ಯ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಖಚಿತ ಮಾಹಿತಿಯ ಪ್ರಕಾರ ಶಮಿ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಆದರೀಗ ಕೇಳಿಬಂದಿರುವ ಮಾಹಿತಿ ಪ್ರಕಾರ ಅವರು ಟಿ20 ವಿಶ್ವಕಪ್ನಿಂದಲೂ ಹೊರಬೀಳಲಿದ್ದಾರೆ.

ಶಮಿ ಕಂಬ್ಯಾಕ್ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿ ಮೂಲಕ ಶಮಿ ತಂಡಕ್ಕೆ ಪುನರಾಗಮನ ಮಾಡಬಹುದು ಎಂದಿದ್ದಾರೆ. ಇದರರ್ಥ ಶಮಿ ಜೂನ್ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ ಅಲಭ್ಯರಾಗುವುದು ಖಚಿತವಾಗಿದೆ.

ಮುಂದುವರೆದು ಮಾತನಾಡಿರುವ ಜಯ್ ಶಾ, ಶಮಿ ಅವರ ಶಸ್ತ್ರಚಿಕಿತ್ಸೆಗೆ ಯಶಸ್ವಿಯಾಗಿದ್ದು, ಅವರು ಲಂಡನ್ನಿಂದ ಭಾರತಕ್ಕೆ ಮರಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಯೊಂದಿಗೆ ಶಮಿ ತಂಡಕ್ಕೆ ವಾಪಸಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಭಾರತವು ಸೆಪ್ಟೆಂಬರ್‌ನಲ್ಲಿ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳ ಸರಣಿಗಳಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಜಯ್ ಶಾ ಹೇಳಿಕೆ ಪ್ರಕಾರ ಶಮಿ ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುವುದನ್ನು ಕಾಣಬಹುದಾಗಿದೆ.

ಮೊಹಮ್ಮದ್ ಶಮಿ ಕಳೆದ ವರ್ಷ ಅಂದರೆ 2023 ರ ನವೆಂಬರ್ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆಡಿದ 7 ಪಂದ್ಯಗಳಲ್ಲಿ ಅವರು 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

ಶಮಿ ಜೊತೆಗೆ ಕೆಎಲ್ ರಾಹುಲ್ ವಾಪಸಾತಿ ಕುರಿತು ಅಪ್‌ಡೇಟ್ ನೀಡಿದ ಜಯ್ ಶಾ, ಕೆಎಲ್ ರಾಹುಲ್ ಪ್ರಸ್ತುತ ಎನ್ಸಿಎನಲ್ಲಿದ್ದು, ಅವರು ರಿಹ್ಯಾಬ್ (ಗಾಯ ಚೇತರಿಕೆ ಪ್ರಕ್ರಿಯೆ) ಪ್ರಾರಂಭಿಸಿದ್ದಾರೆ ಎಂದಿದ್ದಾರೆ. ಇದರರ್ಥ ರಾಹುಲ್ ಮುಂಬರುವ ಐಪಿಎಲ್ನಲ್ಲಿ ಆಡುವುದನ್ನು ಕಾಣಬಹುದಾಗಿದೆ.




