IPL 2024: ನೋ DRS, ಈ ಬಾರಿ SRS

| Updated By: ಝಾಹಿರ್ ಯೂಸುಫ್

Updated on: Mar 20, 2024 | 12:59 PM

IPL 2024: ಐಪಿಎಲ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.

IPL 2024: ನೋ DRS, ಈ ಬಾರಿ SRS
IPL
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (​IPL 2024) ಸೀಸನ್ 17 ರಲ್ಲಿ ಡಿಸಿಷನ್ ರಿವ್ಯೂ ಸಿಸ್ಟಂ (DRS) ಬದಲಿಗೆ ಸ್ಮಾರ್ಟ್ ರಿಪ್ಲೇ ಸಿಸ್ಟಂ (SRS) ಅನ್ನು ಬಳಸುವುದಾಗಿ ಬಿಸಿಸಿಐ ತಿಳಿಸಿದೆ. ಈ ಮೂಲಕ ಅಂಪೈರ್​ ತೀರ್ಪುಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಬಿಸಿಸಿಐ ಮುಂದಾಗಿದೆ. ಸ್ಮಾರ್ಟ್ ರಿಪ್ಲೇ ಸಿಸ್ಟಮ್​ ಬಳಕೆಯಿಂದ ತ್ವರಿತವಾದ, ಹೆಚ್ಚು ನಿಖರವಾದ ಫಲಿತಾಂಶ ಸಿಗಲಿದೆ. ಅಂದರೆ ಡಿಆರ್​ಎಸ್​ ತೀರ್ಪುಗಳಲ್ಲಿ ಕಂಡು ಬರುತ್ತಿದ್ದಂತಹ ಯಾವುದೇ ಗೊಂದಲಗಳು ಇಲ್ಲಿ ಕಾಣ ಸಿಗುವುದಿಲ್ಲ. ಈ ಮೂಲಕ ಮೂರನೇ ಅಂಪೈರ್ ತಕ್ಷಣವೇ ತೀರ್ಪು ಪ್ರಕಟಿಸಲಿದ್ದಾರೆ.

ಸ್ಮಾರ್ಟ್​ ರಿಪ್ಲೇ ಸಿಸ್ಟಮ್​ ಕಾರ್ಯ ನಿರ್ವಹಿಸುವುದು ಹೇಗೆ?

ಡಿಆರ್​ಎಸ್​ ನಂತೆ ಇಲ್ಲೂ ಕೂಡ ಫೀಲ್ಡ್​ ಅಂಪೈರ್ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಬೇಕು. ಆದರೆ ಈ ಬಾರಿ ಮೂರನೇ ಅಂಪೈರ್ ಟಿವಿ ನಿರ್ದೇಶಕರ ಇನ್​ಪುಟ್​ಗಾಗಿ ಕಾಯುವುದಿಲ್ಲ. ಬದಲಾಗಿ ಹಾಕ್​-ಐ ಅಪರೇಟ್​ಗಳ ನೆರವಿನಿಂದ ತಕ್ಷಣವೇ ತೀರ್ಪು ಪ್ರಕಟಿಸಲಿದ್ದಾರೆ.

ಸ್ಮಾರ್ಟ್ ರಿಪ್ಲೇ ಸಿಸ್ಟಮ್ ಅಡಿಯಲ್ಲಿ, ಟಿವಿ ಅಂಪೈರ್ ಎರಡು ಹಾಕ್-ಐ ಆಪರೇಟರ್‌ಗಳಿಂದ ನೇರವಾಗಿ ಇನ್‌ಪುಟ್‌ಗಳನ್ನು ಸ್ವೀಕರಿಸಲಿದ್ದಾರೆ. ಈ ಆಪರೇಟ್​ಗಳು ಕೂಡ ಅಂಪೈರ್​ ಜೊತೆಗೆ ಒಂದೇ ಕೋಣೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಆಪರೇಟರ್​ಗಳ ಮುಖ್ಯ ಕೆಲಸವೆಂದರೆ, ಹಾಕ್-ಐನ ಎಂಟು ಹೈ-ಸ್ಪೀಡ್ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ಚಿತ್ರಗಳನ್ನು ಅಂಪೈರ್​ಗೆ ಒದಗಿಸುವುದು. ಇಲ್ಲಿಯವರೆಗೆ ಮೂರನೇ ಅಂಪೈರ್ ಮತ್ತು ಹಾಕ್-ಐ ಆಪರೇಟರ್‌ಗಳ ನಡುವೆ ವಾಹಿನಿಯಾಗಿದ್ದ ಟಿವಿ ಪ್ರಸಾರಕರು ಇನ್ನು ಮುಂದೆ ಹೊಸ ವ್ಯವಸ್ಥೆಯ ಅಡಿಯಲ್ಲಿ ಭಾಗಿಯಾಗುವುದಿಲ್ಲ.

SRSನ ಅನುಕೂಲವೇನು?

ಸ್ಮಾರ್ಟ್ ರಿಪ್ಲೇ ಸಿಸ್ಟಂ ಬಳಕೆಯಿಂದ ಮೂರನೇ ಅಂಪೈರ್ ಹಲವು ಆ್ಯಂಗಲ್​ನಿಂದ ವಿಡಿಯೋವನ್ನು ಪರಿಶೀಲಿಸಬಹುದು. ಅಂದರೆ ಇಲ್ಲಿ ಹಾಕ್​-ಐ ಆಪರೇಟರ್​ಗಳು ಸ್ಪ್ಲಿಟ್-ಸ್ಕ್ರೀನ್​ಗಳನ್ನು ಬಳಸಲಿದ್ದಾರೆ. ಇದರಿಂದ ತಕ್ಷಣವೇ ಯಾವುದೇ ತೀರ್ಪು ನೀಡಲು ಆಯಾ ಸ್ಕ್ರೀನ್​ನ ನೆರವು ಪಡೆಯಬಹುದು.

ಉದಾಹರಣೆಗೆ, ಬೌಂಡರಿ ಲೈನ್​ನಲ್ಲಿ ಫೀಲ್ಡರ್​​ ಕ್ಯಾಚ್ ಹಿಡಿದಿದ್ದಾರೆ ಎಂದಿಟ್ಟುಕೊಳ್ಳಿ. ಈ ವೇಳೆ ಫೀಲ್ಡರ್​ನ ಕಾಲು ಬೌಂಡರಿ ಲೈನ್​ಗೆ ತಾಗಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳಲು, ತಕ್ಷಣವೇ ಕಾಲಿನ ಭಾಗದ ವಿಡಿಯೋವನ್ನು ಸ್ಪ್ಲಿಟ್ ಸ್ಕ್ರೀನ್​ನಲ್ಲಿ ಪರಿಶೀಲಿಸಬಹುದು. ಅಲ್ಲದೆ ಪಾದದ ಯಾವ ಭಾಗ ಬೌಂಡರಿ ಲೈನ್​ಗೆ ತಾಗಿದೆ ಎಂಬುದರ ತುಣುಕಿನ ಭಾಗದೊಂದಿಗೆ ಸ್ಪಷ್ಟ ತೀರ್ಪು ನೀಡಲು ಸಾಧ್ಯವಾಗಲಿದೆ.

ಈ ಹಿಂದೆ ಟಿವಿ ಅಂಪೈರ್‌ಗೆ ಅಂತಹ ಸ್ಪಷ್ಟ ದೃಶ್ಯಗಳು ಸಿಗುತ್ತಿರಲಿಲ್ಲ. ಇದರಿಂದ ಫೀಲ್ಡ್ ಅಂಪೈರ್ ನೀಡಿದ ತೀರ್ಪನ್ನೇ ಮೂರನೇ ಅಂಪೈರ್ ಮುಂದುವರೆಸುತ್ತಿದ್ದರು. ಆದರೆ ಈ ಬಾರಿ ಅಂತಹ ಸಮಸ್ಯೆ ಎದುರಾಗುವುದಿಲ್ಲ. ಬದಲಾಗಿ ಫೀಲ್ಡಿಂಗ್​, ನೋಬಾಲ್, ರನ್​ಔಟ್ ಸೇರಿದಂತೆ ಪ್ರತಿಯೊಂದರ ಸ್ಪಷ್ಟ ಚಿತ್ರಣ ಮೂರನೇ ಅಂಪೈರ್ ಬಳಿ ಇರಲಿದೆ.

ಕ್ಯಾಮೆರಾಗಳು ಇರುವುದೆಲ್ಲಿ?

ಐಪಿಎಲ್​ನ ಪ್ರತಿ ಪಂದ್ಯದಲ್ಲೂ ಎಂಟು ಹಾಕ್-ಐ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಬೌಂಡರಿಗಳ ಬಳಿ ನಾಲ್ಕು ಕ್ಯಾಮೆರಾಗಳನ್ನು ಮತ್ತು ವಿಕೆಟ್ ಸ್ಕ್ವೇರ್ ಬಳಿಕ ನಾಲ್ಕು ಕ್ಯಾಮೆರಾಗಳನ್ನು ಇಡಲಾಗುತ್ತದೆ. ಈ ಮೂಲಕ ಸ್ಟಂಪಿಂಗ್‌ಗಳು, ರನ್‌ಔಟ್‌ಗಳು, ಕ್ಯಾಚ್‌ಗಳು ಮತ್ತು ಓವರ್‌ಥ್ರೋಗಳ ದೃಶ್ಯಗಳನ್ನು ಈ ಕ್ಯಾಮೆರಾಗಳು ಸೆರೆ ಹಿಡಿಯಲಿದೆ.

ಇದನ್ನೂ ಓದಿ: Virat Kohli: ಈ ಸಲ RCB ಡಬಲ್ ಧಮಾಕ: ವಿರಾಟ್ ಕೊಹ್ಲಿ ಘೋಷಣೆ

ವಿಶೇಷ ಎಂದರೆ ಹಾಕ್-ಐ ಕ್ಯಾಮೆರಾಗಳು ಪ್ರತಿ ಸೆಕೆಂಡಿಗೆ ಸರಿಸುಮಾರು 300 ಫ್ರೇಮ್‌ಗಳಲ್ಲಿ ರೆಕಾರ್ಡ್ ಮಾಡುತ್ತವೆ. ಅಂದರೆ ಅಂಪೈರ್‌ಗಳು ತಮ್ಮ ನಿರ್ಧಾರವನ್ನು ಪ್ರಕಟಿಸಲು ಹಲವು ಆಯ್ಕೆಯನ್ನು ಹೊಂದಿರಲಿದ್ದಾರೆ. ಅಲ್ಲದೆ ಸ್ಪಷ್ಟ ಚಿತ್ರಣದೊಂದಿಗೆ ತೀರ್ಪನ್ನು ಪ್ರಕಟಿಸುವ ಆಯ್ಕೆ ಮೂರನೇ ಅಂಪೈರ್​ಗೆ ಇರಲಿದೆ. ಅದರಂತೆ ಸ್ಮಾರ್ಟ್ ರಿಪ್ಲೇ ಸಿಸ್ಟಂ ಐಪಿಎಲ್​ನಲ್ಲಿ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಬಿಸಿಸಿಐ ಮತ್ತು ಐಸಿಸಿ ಎಲ್ಲಾ ಟೂರ್ನಿಗಳಲ್ಲೂ SRS ಅನ್ನು ಬಳಸುವುದರಲ್ಲಿ ಅನುಮಾನವೇ ಬೇಡ.

 

 

Published On - 12:55 pm, Wed, 20 March 24