IPL 2024: ರಾಜಸ್ಥಾನ್ ರಾಯಲ್ಸ್ (Rajastan Royals) ತಂಡವು ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದೆ. ಮೊದಲ 9 ಪಂದ್ಯಗಳಲ್ಲಿ 8 ಜಯ ಸಾಧಿಸಿ ಅಬ್ಬರಿಸಿದ್ದ ರಾಜಸ್ಥಾನ್ ತಂಡವು ದ್ವಿತೀಯಾರ್ಧದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅದರಲ್ಲೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಸೋಲಿನ ಬಳಿಕ ಮಾತನಾಡಿದ ನಾಯಕ ಸಂಜು ಸ್ಯಾಮ್ಸನ್, ತಂಡದ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ನಾವು ಇನ್ನೂ ಹೆಚ್ಚಿನ ರನ್ ಗಳಿಸಬೇಕಿತ್ತು. ನನ್ನ ಪ್ರಕಾರ 10-15 ರನ್ ಕಡಿಮೆ ಕಲೆಹಾಕಿದ್ದೆವು. ಬರ್ಸಾಪರಾ ಪಿಚ್ನಲ್ಲಿ ಸುಲಭವಾಗಿ 160 ರನ್ ಕಲೆಹಾಕಬಹುದಾಗಿತ್ತು. ಆದರೆ ನಾವು ನಮ್ಮ ನೈಜ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಗಿದ್ದೇವೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಕಳೆದ ನಾಲ್ಕು ಪಂದ್ಯಗಳಿಂದ ನಾವು ವೈಫಲ್ಯಗಳನ್ನು ಅನುಭವಿಸುತ್ತಿದ್ದೇವೆ. ಹೀಗಾಗಿಯೇ 4 ಮ್ಯಾಚ್ ಸೋತಿದ್ದೇವೆ. ಇದಕ್ಕೆ ಮುಖ್ಯ ಕಾರಣ ತಂಡವಾಗಿ ಸಾಂಘಿಕ ಪ್ರದರ್ಶನ ನೀಡದಿರುವುದು. ನಮ್ಮಲ್ಲಿ ಹಲವು ಮ್ಯಾಚ್ ವಿನ್ನರ್ಗಳಿದ್ದಾರೆ. ಆದರೆ ಯಾರೂ ಕೂಡ ಪಂದ್ಯ ಗೆಲ್ಲಿಸಿಕೊಡುವಂತಹ ಪ್ರದರ್ಶನ ನೀಡುತ್ತಿಲ್ಲ. ಯಾರಾದೂ ಒಬ್ಬರು ಪಂದ್ಯ ಗೆಲ್ಲಿಸುವಂತಹ ಇನಿಂಗ್ಸ್ ಆಡೇಬೇಕಿದೆ ಎಂದು ಇದೇ ವೇಳೆ ಸಂಜು ಸ್ಯಾಮ್ಸನ್ ಹೇಳಿದರು.
ಈ ಹಿಂದೆ ನಾವು 200 ಪ್ಲಸ್ ರನ್ಗಳನ್ನು ಸುಲಭವಾಗಿ ಕಲೆಹಾಕಿದ್ದೇವೆ. ಇದೀಗ ರನ್ಗಳಿಸಲು ಪರದಾಡುತ್ತಿದ್ದೇವೆ. ಪಂಜಾಬ್ ಕಿಂಗ್ಸ್ ವಿರುದ್ಧ 160-170 ರನ್ ಬಾರಿಸಿದ್ದರೂ ಅದು ಉತ್ತಮ ಮೊತ್ತವಾಗುತ್ತಿತ್ತು. ಆದರೆ ನಾವು ಬ್ಯಾಟಿಂಗ್ ವೇಳೆ ಜಾಣತನದ ಆಟ ಪ್ರದರ್ಶಿಸುವಲ್ಲಿ ವಿಫಲವಾಗಿದ್ದೇವೆ. ಆಶಾದಾಯಕವಾಗಿ, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಅಲ್ಲದೆ ಕೊನೆಯ ಲೀಗ್ ಪಂದ್ಯದಲ್ಲಿ ಜಯ ಸಾಧಿಸುತ್ತೇವೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೋತರೂ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಅಂದರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಟಾಪ್-4 ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಏಕೆಂದರೆ ಆರ್ಆರ್ ತಂಡವು ಈಗಾಗಲೇ 16 ಅಂಕಗಳನ್ನು ಕಲೆಹಾಕಿದೆ.
ಇದನ್ನೂ ಓದಿ: IPL 2024: SRH ವಿರುದ್ಧದ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡದ 6 ಆಟಗಾರರು ಅಲಭ್ಯ..!
ಇನ್ನು ಸಿಎಸ್ಕೆ ಮತ್ತು ಎಸ್ಆರ್ಹೆಚ್ ತಂಡಗಳಿಗೆ ಮಾತ್ರ 16 ಅಂಕಗಳನ್ನು ಸಂಪಾದಿಸಲು ಅವಕಾಶವಿದೆ. ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು 16 ಅಂಕಗಳನ್ನು ಕಲೆಹಾಕಿದರೂ ರಾಜಸ್ಥಾನ್ ರಾಯಲ್ಸ್ ಟಾಪ್-4 ನಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿಯೇ ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೂ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ.
Published On - 7:53 am, Thu, 16 May 24