
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು (ಮಾ.23) ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸಂಜೆ ಜರುಗಲಿರುವ ಮೊದಲ ಮ್ಯಾಚ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಕಣಕ್ಕಿಳಿಯಲಿವೆ.
ರಾತ್ರಿ 7.30 ರಿಂದ ಶುರುವಾಗಲಿರುವ ಈ ಎಲ್ ಕ್ಲಾಸಿಕೊ ಪಂದ್ಯವು ಇದೀಗ ಎಲ್ಲರ ಕೇಂದ್ರ ಬಿಂದು. ಏಕೆಂದರೆ ಐಪಿಎಲ್ನ ಎರಡು ಬಲಿಷ್ಠ ತಂಡಗಳ ಮುಖಾಮುಖಿಯಲ್ಲಿ ಶುಭಾರಂಭ ಮಾಡುವವರು ಯಾರು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಶುಭಾರಂಭ ಮಾಡುವ ವಿಷಯದಲ್ಲಿ ಮುಂಬೈ ಪಡೆ ಕಳೆದ 13 ವರ್ಷಗಳಿಂದ ಹಿಂದೆ ಉಳಿದಿದೆ. ಇದಕ್ಕೆ ಸಾಕ್ಷಿ ಕಳೆದ ಹದಿಮೂರು ವರ್ಷಗಳಲ್ಲಿ ಆರಂಭಿಕ ಪಂದ್ಯಗಳಲ್ಲಿ ಸೋತಿರುವುದು.
ಅಂದರೆ ಮುಂಬೈ ಇಂಡಿಯನ್ಸ್ ಪಡೆಯು ಐಪಿಎಲ್ನ ತನ್ನ ಮೊದಲ ಪಂದ್ಯದಲ್ಲಿ ಗೆದ್ದು 13 ವರ್ಷಗಳೇ ಕಳೆದಿವೆ. 2012 ರ ಬಳಿಕ ಮುಂಬೈ ಇಂಡಿಯನ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಒಮ್ಮೆಯೂ ಜಯ ಸಾಧಿಸಿಲ್ಲ.
2012 ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿತ್ತು. ಈ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ಪಾಲಿಗೆ ಶುಭಾರಂಭ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.
2013 ರಿಂದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಕಳೆದ 11 ವರ್ಷಗಳಲ್ಲಿ ಹಿಟ್ಮ್ಯಾನ್ ಸಾರಥ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ ಗೆದ್ದಿರಲಿಲ್ಲ.
2024 ರಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಪರಾಜಯಗೊಂಡಿತ್ತು. ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ತನ್ನ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
ಕಳೆದ ಸೀಸನ್ನ ಕೊನೆಯ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ತಪ್ಪು ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಒಂದು ಪಂದ್ಯದ ನಿಷೇಧ ಹೇರಲಾಗಿದ್ದು, ಹೀಗಾಗಿ ಇಂದು ನಡೆಯಲಿರುವ ಸಿಎಸ್ಕೆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತ 12 ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪಾಲಿಗೆ ಮರೀಚಿಕೆಯಾಗಿರುವ ಶುಭಾರಂಭವು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ದಕ್ಕಲಿದೆಯಾ ಎಂಬುದೇ ಪ್ರಶ್ನೆ. ಆದರೆ ದಕ್ಕುವುದಿದ್ದರೂ ಅದು ಅಂದುಕೊಂಡಷ್ಟು ಸುಲಭದಲ್ಲಿ ದಕ್ಕುವುದಿಲ್ಲ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರು ಮೈದಾನ ಚೆಪಾಕ್ ಸ್ಟೇಡಿಯಂನಲ್ಲಿ.
ಹೀಗಾಗಿ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಎಲ್ ಕ್ಲಾಸಿಕೊ ಪಂದ್ಯದಲ್ಲಿ ಉಭಯ ತಂಡಗಳಿಂದ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ವಿಕೆಟ್ ಕೀಪರ್), ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್, ಮಥೀಶ ಪತಿರಾಣ, ಕಮಲೇಶ್ ನಾಗರಕೋಟಿ, ನಾಥನ್ ಎಲ್ಲಿಸ್, ಮುಖೇಶ್ ಚೌಧರಿ, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶೇಕ್ ರಶೀದ್, ಅಂಶುಲ್ ಕಾಂಬೋಜ್, ಶ್ರೇಯಸ್ ಗೋಪಾಲ್, ನೂರ್ ಅಹ್ಮದ್, ಗುರ್ಜಪ್ನೀತ್ ಸಿಂಗ್, ರಾಮಕೃಷ್ಣ ಘೋಷ್, ಆಂಡ್ರೆ ಸಿದ್ದಾರ್ಥ್ ಸಿ, ವಂಶ್ ಬೇಡಿ, ಜೇಮಿ ಓವರ್ಟನ್.
ಇದನ್ನೂ ಓದಿ: VIDEO: ಅವನು ನನ್ನ ಫ್ಯಾನ್, ಏನೂ ಮಾಡ್ಬೇಡಿ… ಅಭಿಮಾನಿಯ ಬೆಂಬಲಕ್ಕೆ ನಿಂತ ವಿರಾಟ್ ಕೊಹ್ಲಿ
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ರಿಯಾನ್ ರಿಕೆಲ್ಟನ್, ರಾಬಿನ್ ಮಿಂಝ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ರೀಸ್ ಟೋಪ್ಲಿ, ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಮುಜೀಬ್ ಉರ್ ರಹಮಾನ್, ಶ್ರೀಜಿತ್ ಕೃಷ್ಣನ್, ಟ್ರೆಂಟ್ ಬೌಲ್ಟ್, ಅರ್ಜುನ್ ತೆಂಡೂಲ್ಕರ್, ಬೆವನ್ ಜೇಕಬ್ಸ್, ಅಶ್ವನಿ ಕುಮಾರ್, ರೀಸ್ ಟೋಪ್ಲಿ, ಕರ್ಣ್ ಶರ್ಮಾ, ಸತ್ಯನಾರಾಯಣ ರಾಜು, ವಿಘ್ನೇಶ್ ಪುತ್ತೂರು, ಹಾರ್ದಿಕ್ ಪಾಂಡ್ಯ.