VIDEO: ಅವನು ನನ್ನ ಫ್ಯಾನ್, ಏನೂ ಮಾಡ್ಬೇಡಿ… ಅಭಿಮಾನಿಯ ಬೆಂಬಲಕ್ಕೆ ನಿಂತ ವಿರಾಟ್ ಕೊಹ್ಲಿ
IPL 2025 KKR vs RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಸೀಸನ್-18ರ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೋಲುಣಿಸಿದೆ. ಅದು ಸಹ 7 ವಿಕೆಟ್ಗಳಿಂದ ಬಗ್ಗು ಬಡಿಯುವ ಮೂಲಕ ಎಂಬುದು ವಿಶೇಷ. ಈ ಪಂದ್ಯದ ಗೆಲುವಿನ ರೂವಾರಿಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು.

IPL 2025: ಐಪಿಎಲ್ ಸೀಸನ್-18ರ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ವೀರಾವೇಷ ಪ್ರದರ್ಶಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಇತ್ತ ಕಿಂಗ್ ಕೊಹ್ಲಿ ಅರ್ಧಶತಕ ಪೂರೈಸುತ್ತಿದ್ದಂತೆ ಅತ್ತ ಕಡೆಯಿಂದ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ್ದರು.
ಈಡನ್ ಗಾರ್ಡನ್ಸ್ ಮೈದಾನದ ಸಿಬ್ಬಂದಿಗಳ ಕಣ್ತಪ್ಪಿಸಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ಅಭಿಮಾನಿಯು ನೇರವಾಗಿ ಬಂದು ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದರು. ಅಲ್ಲದೆ ಕಿಂಗ್ ಕೊಹ್ಲಿಯನ್ನು ತಬ್ಬಿಕೊಳ್ಳುವ ಮೂಲಕ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದರು.
ವಿಶೇಷ ಎಂದರೆ ಅಭಿಮಾನಿಯು ತಬ್ಬಿಕೊಳ್ಳುತ್ತಿದ್ದಂತೆ ಕೊಹ್ಲಿ ನಗುತ್ತಿರುವುದು ಕಾಣಿಸಿತು. ಅಷ್ಟರಲ್ಲಾಗಲೇ ಮೈದಾನದ ಸಿಬ್ಬಂದಿಗಳು ಧಾವಿಸಿ ಬಂದು ವಶಕ್ಕೆ ಪಡೆದರು. ಈ ವೇಳೆ ಜಾಗೃತೆ, ಆತನನ್ನು ಏನೂ ಮಾಡ್ಬೇಡಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡುತ್ತಿರುವುದು ಕಂಡು ಬಂತು. ಇದೀಗ ಕಿಂಗ್ ಕೊಹ್ಲಿಯ ಅಭಿಮಾನಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಅಭಿಮಾನಿಯ ವಿಡಿಯೋ:
RCB ಶುಭಾರಂಭ:
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಅಜಿಂಕ್ಯ ರಹಾನೆ (56) ಆಕರ್ಷಕ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು.
175 ರನ್ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಇನಿಂಗ್ಸ್ ಆಡಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಮೊದಲ 6 ಓವರ್ಗಳಲ್ಲೇ 80 ರನ್ ಚಚ್ಚಿದ್ದರು.
ಇದರ ನಡುವೆ 31 ಎಸೆತಗಳನ್ನು ಎದುರಿಸಿದ ಫಿಲ್ ಸಾಲ್ಟ್ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 56 ರನ್ ಬಾರಿಸಿ ಔಟಾದರು. ಮತ್ತೊಂದೆಡೆ ವೀರಾವೇಷದಿಂದ ಬ್ಯಾಟ್ ಬೀಸಿದ ಕಿಂಗ್ ಕೊಹ್ಲಿ ಕೇವಲ 36 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 59 ರನ್ ಸಿಡಿಸಿದರು. ಈ ಮೂಲಕ ಆರ್ಸಿಬಿ ತಂಡವು 16.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು
ಈ ಗೆಲುವಿನೊಂದಿಗೆ ಆರ್ಸಿಬಿ ಪಡೆ ಅಂಕ ಪಟ್ಟಿಯಲ್ಲಿ ಪಾಯಿಂಟ್ಸ್ ಖಾತೆ ತೆರೆದಿದ್ದು, ಮಾರ್ಚ್ 28 ರಂದು ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.