IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು
Kolkata Knight Riders vs Royal Challengers Bengaluru: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟರ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 174 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಪರ ಫಿಲ್ ಸಾಲ್ಟ್ (56) ಹಾಗೂ ವಿರಾಟ್ ಕೊಹ್ಲಿ (59) ಸ್ಪೋಟಕ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್ಸಿಬಿ 16.2 ಓವರ್ಗಳಲ್ಲಿ 177 ರನ್ ಬಾರಿಸಿ 7 ವಿಕೆಟ್ಗಳ ಜಯ ಸಾಧಿಸಿದೆ.
Updated on:Mar 23, 2025 | 7:05 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡವು ಬೌಲಿಂಗ್ ಆಯ್ದುಕೊಂಡಿತು.

ಆದರೆ ಬೌಲಿಂಗ್ಗಾಗಿ ಕಣಕ್ಕಿಳಿದ ಆರ್ಸಿಬಿ ಬಳಗದಲ್ಲಿ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಇಂಪ್ಯಾಕ್ಟ್ ಸಬ್ ಆಗಿಯೂ ಕೂಡ ಅವರನ್ನು ಬಳಸಿಕೊಳ್ಳಲಾಗಲಿಲ್ಲ. ಇದರ ಬೆನ್ನಲ್ಲೇ ಭುವಿ ಕಣಕ್ಕಿಳಿಯದಿರಲು ಕಾರಣವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಕೊಲ್ಕತ್ತಾದಲ್ಲಿ ನಡೆದ ಅಭ್ಯಾಸದ ವೇಳೆ ಭುವನೇಶ್ವರ್ ಕುಮಾರ್ ಅವರ ಕೈಗೆ ಸಣ್ಣ ಗಾಯವಾಗಿದ್ದು, ಹೀಗಾಗಿ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಗಾಯವು ಗಂಭೀರವಲ್ಲದಿದ್ದರೂ, ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದೇ ಪ್ರಶ್ನೆ.

ಏಕೆಂದರೆ ಭುವಿ ಆರ್ಸಿಬಿ ತಂಡದ ಪ್ರಮುಖ ವೇಗಿ. ಇನ್ನುಳಿದ 13 ಲೀಗ್ ಪಂದ್ಯಗಳು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಖ್ಯ. ಹೀಗಾಗಿ ಅವರ ಗಾಯವು ಸಂಪೂರ್ಣವಾಗಿ ಗುಣವಾದರೆ ಮಾತ್ರ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಆರ್ಸಿಬಿ ಮೂಲಗಳು ತಿಳಿಸಿವೆ.

ಆರ್ಸಿಬಿ ತಂಡದ ಮುಂದಿನ ಪಂದ್ಯವು ಮಾರ್ಚ್ 28 ರಂದು ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಇನ್ನೂ ಐದು ದಿನಗಳ ಕಾಲಾವಕಾಶವಿದೆ. ಇದರೊಳಗೆ ಭುವನೇಶ್ವರ್ ಕುಮಾರ್ ಅವರ ಗಾಯವು ಸಂಪೂರ್ಣ ವಾಸಿಯಾದರೆ, ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
Published On - 7:04 am, Sun, 23 March 25



















