IPL 2025: ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳ್ಬೇಡಿ… ವಿರಾಟ್ ಕೊಹ್ಲಿ ಮೆಸೇಜ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ಬ ಬೆಂಗಳೂರು ತಂಡ ಮೂರು ಬಾರಿ ಫೈನಲ್ಗೆ ಪ್ರವೇಶಿಸಿದೆ. 2009 ರಲ್ಲಿ ಚೊಚ್ಚಲ ಫೈನಲ್ ಆಡಿದ್ದ ಆರ್‌ಸಿಬಿ, ಆ ಬಳಿಕ 2011 ರಲ್ಲಿ ಮತ್ತೊಮ್ಮೆ ಫೈನಲ್ಗೇರಿತ್ತು. ಇನ್ನು 2016 ರಲ್ಲಿ ಮೂರನೇ ಬಾರಿ ಅಂತಿಮ ಪಂದ್ಯವಾಡಿತ್ತು. ಆದರೆ ಈ ಮೂರು ಫೈನಲ್ಗಳಲ್ಲೂ ಎಡವಿ ಆರ್‌ಸಿಬಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶ ಕೈತಪ್ಪಿಸಿಕೊಂಡಿತು.

ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯದೊಂದಿಗೆ ಶುರುವಾಗುವ ಆರ್‌ಸಿಬಿ ಅಭಿಮಾನಿಗಳ ಟ್ರೋಫಿ ಗೆಲ್ಲುವ ಕನಸು ಇದೀಗ 18ನೇ ವರ್ಷಕ್ಕೆ ಬಂದು ನಿಂತಿದೆ. ಈ ಕನಸಿನೊಂದಿಗೆ ಐಪಿಎಲ್ ಸೀಸನ್-18 ಆರಂಭಿಸುವ ಇರಾದೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಅದು ಸಹ ಈ ಸಲ ಕಪ್ ನಮ್ದೇ ಎಂದು ಮಾತ್ರ ಹೇಳ್ಬೇಡಿ ಎನ್ನುವ ಮೂಲಕ..!
ಹೌದು, ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳ್ಬೇಡಿ ಎಂದು ಎಬಿ ಡಿವಿಲಿಯರ್ಸ್ಗೆ ಪರ್ಸನಲ್ ಮೆಸೇಜ್ ಕಳಿಸಿದ್ದಾರೆ. ಈ ವಿಚಾರವನ್ನು ಖುದ್ದು ಎಬಿಡಿ ಬಹಿರಂಗಪಡಿಸಿದ್ದಾರೆ.
ಖಾಸಗಿ ಚಾನೆಲ್ ಚರ್ಚೆಯಲ್ಲಿ ಮಾತನಾಡಿದ ಎಬಿಡಿ, ಎಲ್ಲೋ ಒಂದ್ಸಲ ನಾನು ಈ ಸಲ ಕಪ್ ನಮ್ದೇ ಅಂತ ಹೇಳಿದ್ದೆ. ಇದನ್ನು ನೋಡಿದ ವಿರಾಟ್ ಕೊಹ್ಲಿ ನನಗೆ ಪರ್ಸನಲ್ ಮೆಸೇಜ್ ಕಳಿಸಿ, ದಯವಿಟ್ಟು ಅದನ್ನು ಮಾತ್ರ ಹೇಳ್ಬೇಡಿ. ಈ ಸಲ ಕಪ್ ನಮ್ದೇ ಎನ್ನುವುದು ಕೇಳಿ ಕೇಳಿ ಸಾಕಾಗಿದೆ ಎಂದಿದ್ದರು.
ಹೀಗಾಗಿ ಈ ಘೋಷವಾಕ್ಯವನ್ನು ನಾನು ಬಿಟ್ಟಿದ್ದೀನಿ. ಇದಾಗ್ಯೂ ಈ ಸಲ ಆರ್‌ಸಿಬಿ ಕಪ್ ಗೆಲ್ಲುತ್ತೆ ಎಂಬ ವಿಶ್ವಾಸವಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಉತ್ತಮ ಸಮತೋಲನದಿಂದ ಕೂಡಿದೆ. ಹೀಗಾಗಿ ಈ ಬಾರಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಿದೆ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಇನ್ನು ಇದು ಐಪಿಎಲ್ನ 18ನೇ ಸೀಸನ್. ಅತ್ತ ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್ 18. ಹಾಗಾಗಿ ಈ ವರ್ಷ ಆರ್ಸಿಬಿಯದ್ದು ಎಂದು ನಾನು ಭಾವಿಸುತ್ತೇನೆ. ಅದರಂತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯುವಾಗ ನಾನು ಸಹ ಅಲ್ಲಿರುತ್ತೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಇದನ್ನೂ ಓದಿ: IPL 2025: RCB ಗಿಂತ ಡೆಲ್ಲಿ ಪಡೆಯಲ್ಲೇ ಕನ್ನಡಿಗರ ದರ್ಬಾರು
ಅಂದಹಾಗೆ 2008 ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಕಪ್ ಗೆದ್ದಿಲ್ಲ. ಆರ್‌ಸಿಬಿ ತನ್ನ ಇತಿಹಾಸದಲ್ಲಿ ಕ್ರಮವಾಗಿ 2009, 2011 ಮತ್ತು 2016 ರಲ್ಲಿ ಮೂರು ಬಾರಿ ಐಪಿಎಲ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಮೂರು ಬಾರಿ ಕೂಡ ಫೈನಲ್ನಲ್ಲಿ ಎಡವಿತ್ತು. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್.