ಧೋನಿಗೆ ಪ್ರತಿ ತಿಂಗಳು 70 ಸಾವಿರ ರೂ. ನೀಡುತ್ತಿರುವ ಬಿಸಿಸಿಐ
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮಾರ್ಚ್ 22 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ಹಾಗೂ ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮಾರ್ಚ್ 23 ರಂದು ನಡೆಯಲಿರುವ 3ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲಿದೆ. ಈ ಪಂದ್ಯದ ಮೂಲಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ಗಾಗಿ ಸಜ್ಜಾಗುತ್ತಿದ್ದಾರೆ. ಅದು ಸಹ ತಮ್ಮ 43ನೇ ವಯಸ್ಸಿನಲ್ಲಿ. ಐಪಿಎಲ್ನ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿರುವ ಧೋನಿಯನ್ನು ಈ ಬಾರಿಯ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 4 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು.
ಅದರಂತೆ ಇದೇ ಮೊದಲ ಬಾರಿಗೆ ಧೋನಿ ಕಡಿಮೆ ಮೊತ್ತದ ವೇತನ ಪಡೆಯುತ್ತಿದ್ದಾರೆ. ಅದರಲ್ಲೂ ಇದು ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಸೀಸನ್ ಎನ್ನಲಾಗುತ್ತಿದೆ. ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿರುವ ಧೋನಿ ಐಪಿಎಲ್ನಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ.
ಇದೀಗ 43 ವಯಸ್ಸಿನ ಹಿರಿಕನಾಗಿರುವ ಎಂಎಸ್ಡಿ ಮುಂದಿನ ಸೀಸನ್ನಲ್ಲಿ ಕಾಣಿಸಿಕೊಳ್ಳುವುದು ಡೌಟ್. ಅದರಂತೆ ಐಪಿಎಲ್ 2025 ರೊಂದಿಗೆ ಧೋನಿ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ.
ವಿದಾಯದ ಬಳಿಕವೇನು?
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಬಿಸಿನೆಸ್ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಐಪಿಎಲ್ ನಿವೃತ್ತಿ ಬಳಿಕವೂ ಅದರಲ್ಲೇ ಮುಂದುವರೆಯಲಿದ್ದಾರೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಧೋನಿ 2021 ರಿಂದ ಬಿಸಿಸಿಐ ಕಡೆಯಿಂದ ಪಿಂಚಣಿ ಪಡೆಯುತ್ತಿದ್ದಾರೆ.
ಟೀಮ್ ಇಂಡಿಯಾ ಪರ ಆಡಿದ ಆಟಗಾರರಿಗೆ ಬಿಸಿಸಿಐ ವಿವಿಧ ಹಂತಗಳ ಆಧಾರ ಮೇಲೆ ಪಿಂಚಣಿ ಮೊತ್ತವನ್ನು ಪಾವತಿಸುತ್ತಿದೆ. ಇಲ್ಲಿ ಭಾರತದ ಪರ 75 ಕ್ಕೂ ಹೆಚ್ಚು ಟೆಸ್ಟ್ ಅಥವಾ 50 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಮತ್ತು ಟೀಮ್ ಇಂಡಿಯಾದ ಗಮನಾರ್ಹ ವಿಜಯಗಳಿಗೆ ಕಾರಣರಾದ ಕ್ರಿಕೆಟಿಗರಿಗೆ 70,000 ರೂ.ಗಳ ಪಿಂಚಣಿಯನ್ನು ನೀಡಲಾಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಿಸಿಸಿಐನಿಂದ ತಿಂಗಳಿಗೆ 70,000 ರೂ.ಗಳವರೆಗೆ ಪಿಂಚಣಿ ನೀಡುತ್ತಿದೆ.
ಹಾಗೆಯೇ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಿಗೂ ಕೂಡ ಮಾಸಿಕ 70,000 ರೂ. ಪಿಂಚಣಿ ಮೊತ್ತ ಪಡೆಯುತ್ತಿದ್ದಾರೆ. ಇನ್ನು ಯುವರಾಜ್ ಸಿಂಗ್ ಅವರಿಗೆ 60,000 ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳೆ ಅವರಿಗೆ 30,000 ಪಿಂಚಣಿ ಮೊತ್ತವನ್ನು ಪಾವತಿಸಲಾಗುತ್ತಿದೆ.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಇತ್ತ ಮಾಸಿಕ 70 ಸಾವಿರ ರೂ. ಪಿಂಚಣಿ ಮೊತ್ತದ ಹೊರತಾಗಿಯೂ ಮಹೇಂದ್ರ ಸಿಂಗ್ ಧೋನಿ ಆರ್ಥಿಕವಾಗಿ ಸದೃಢರಾಗಿದ್ದಾರೆ. ಏಕೆಂದರೆ 2023-24 ರಲ್ಲಿ ಧೋನಿ 38 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ.