IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
IPL 2025: RCB ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ 157 ಪಂದ್ಯಗಳಿಂದ ಒಟ್ಟು 4522 ರನ್‌ಗಳನ್ನು ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಹೊಂದಿದ್ದಾರೆ. ಹಾಗೆಯೇ ಆರ್ಸಿಬಿ ಪರ ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ.
Updated on: Mar 19, 2025 | 7:59 AM

ಐಪಿಎಲ್ನಲ್ಲಿ ಕಪ್ ಗೆಲ್ಲುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕನಸು ಕನಸಾಗಿಯೇ ಉಳಿದಿದೆ. ಕಳೆದ 17 ಸೀಸನ್ಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದರೂ ಆರ್ಸಿಬಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ 18ನೇ ಸೀಸನ್ ಹೊಸ್ತಿಲಲ್ಲಿದ್ದೇವೆ. ಇತ್ತ ಐಪಿಎಲ್ ಸೀಸನ್-18 ಆರಂಭಕ್ಕೂ ಮುನ್ನವೇ ಈ ಬಾರಿ ಕಪ್ ಗೆಲ್ಲುವ ತಂಡ ಯಾವುದೆಂದು ಎಬಿ ಡಿವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠವಾಗಿದೆ. ಅದರಲ್ಲೂ ಪ್ಲೇಯಿಂಗ್ ಇಲೆವೆನ್ ರೂಪಿಸಲು ಅತ್ಯಂತ ಸಮತೋಲನದಿಂದ ಕೂಡಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ರಾಯಲ್ಲಾಗಿಯೇ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಎಬಿಡಿ ಡಿವಿಲಿಯರ್ಸ್ ಹೇಳಿದ್ದಾರೆ.

ಆರ್ಸಿಬಿ ತಂಡದ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ಸಾಲ್ಟ್ ಜೊತೆಗಿನ ಬ್ಯಾಟಿಂಗ್ ಅನ್ನು ಕೊಹ್ಲಿ ಆನಂದಿಸುವುದು ಖಚಿತ. ಇನ್ನು ಬೌಲಿಂಗ್ ವಿಭಾಗವನ್ನು ನೋಡಿ, ಭುವನೇಶ್ವರ್ ಕುಮಾರ್ ಅವರ ಅನುಭವ ತಂಡಕ್ಕಿದೆ. ಅವರೊಂದಿಗೆ ಜೋಶ್ ಹ್ಯಾಝಲ್ವುಡ್ ಕೂಡ ಇದ್ದಾರೆ.

ಜೋಶ್ ಹ್ಯಾಝಲ್ವುಡ್ ಸಂಪೂರ್ಣ ಫಿಟ್ನೆಸ್ನೊಂದಿಗೆ ಇಡೀ ಟೂರ್ನಿ ಆಡಿದರೆ ಫಲಿತಾಂಶಗಳು ಆರ್ಸಿಬಿ ಪರವಾಗಲಿದೆ. ಇನ್ನು ಸ್ಪಿನ್ ಆಲ್ರೌಂಡರ್ ಆಗಿ ಕೃನಾಲ್ ಪಾಂಡ್ಯ ಸಹ ಇದ್ದಾರೆ. ಅವರು ಬೌಲಿಂಗ್ನಲ್ಲೂ ಮಿಂಚಬಲ್ಲರು, ಬ್ಯಾಟಿಂಗ್ ಸಹ ಮಾಡಬಲ್ಲರು. ಅಂದರೆ ಈ ಹಿಂದಿಗಿಂತಲೂ ಆರ್ಸಿಬಿ ಈ ಬಾರಿ ಹೆಚ್ಚು ಸಮತೋಲಿತವಾಗಿದೆ ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ಆರ್ಸಿಬಿ ತಂಡವು ಅನುಭವಿ ಹಾಗೂ ಯುವ ಆಟಗಾರರ ಮಿಶ್ರಣವನ್ನು ಹೊಂದಿದೆ. ಹೀಗಾಗಿ ಈ ಬಾರಿ ಆರ್ಸಿಬಿ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ಎದುರು ನೋಡಬಹುದು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಸಲ ಕಪ್ ಗೆಲ್ಲುವ ನಿರೀಕ್ಷೆಯಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.



















