ಟೀಮ್ ಇಂಡಿಯಾ ನಾಯಕ ಐಪಿಎಲ್ ತಂಡವನ್ನು ಮುನ್ನಡೆಸುವುದು ವಾಡಿಕೆ. ಈ ಸಾಂಪ್ರದಾಯಕ್ಕೆ ಬ್ರೇಕ್ ಹಾಕಿದ್ದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ. 2024 ರಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದರು. ಈ ವೇಳೆ ಭಾರತ ತಂಡದ ಹಂಗಾಮಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದರು ಎಂಬುದು ಉಲ್ಲೇಖಾರ್ಹ.
ಆದರೀಗ ಎಲ್ಲವೂ ಬದಲಾಗಿದೆ. ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ಮುಂದಿರುವ ದೊಡ್ಡ ಪ್ರಶ್ನೆ ಎಂದರೆ ಮುಂದಿನ ಸೀಸನ್ನಲ್ಲಿ ತಂಡದ ನಾಯಕ ಯಾರು ಎಂಬುದು.
ಏಕೆಂದರೆ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಟಿ20 ತಂಡದ ನಾಯಕನಾದರೆ, ರೋಹಿತ್ ಶರ್ಮಾ ಏಕದಿನ ತಂಡದ ನಾಯಕ. ಇದೀಗ ಈ ಇಬ್ಬರು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರಾ ಎಂಬುದೇ ಕುತೂಹಲ. ಏಕೆಂದರೆ ರೋಹಿತ್ ಶರ್ಮಾ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಮೇಲೆ ಸೂರ್ಯಕುಮಾರ್ ಯಾದವ್ ಕಣ್ಣಿಟ್ಟಿದ್ದರು.
ಆದರೆ ಹಾರ್ದಿಕ್ ಪಾಂಡ್ಯರನ್ನು ಹೊಸ ನಾಯಕನ್ನಾಗಿ ಘೋಷಿಸುತ್ತಿದ್ದಂತೆ ಇತ್ತ ಸೂರ್ಯಕುಮಾರ್ ಯಾದವ್ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಇದಾಗ್ಯೂ ಸೂರ್ಯ ಐಪಿಎಲ್ ಸೀಸನ್ 17 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಆದರೀಗ ಮುಂಬರುವ ಸೀಸನ್ಗಾಗಿ ಮೆಗಾ ಹರಾಜು ನಡೆಯಲಿದೆ.
ಈ ಮೆಗಾ ಹರಾಜಿಗೂ ಮುನ್ನ ಕೇವಲ ನಾಲ್ವರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದರಂತೆ ಮೂವರು ಭಾರತೀಯರು ಹಾಗೂ ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ನೀಡಬಹುದು. ಈ ನಿಯಮದಂತೆ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವುದು ಯಾರನ್ನ?.
ಮೂವರು ಭಾರತೀಯರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶವಿದ್ದರೆ ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ಅವರನ್ನು ಉಳಿಸಿಕೊಳ್ಳುವುದು ಖಚಿತ. ಇಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾದರೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ. ಇಲ್ಲದಿದ್ದರೆ ಹಿಟ್ಮ್ಯಾನ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು.
ಹೀಗಾಗಿ ರೋಹಿತ್ ಶರ್ಮಾ ಅವರನ್ನು ಮನವೊಲಿಸಬೇಕಾದ ಅನಿವಾರ್ಯತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಇದೆ. ಇದೇ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ದೊಡ್ಡ ಮೊತ್ತ ನೀಡಿ ತಂಡದಲ್ಲೇ ರಿಟೈನ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಇವರಿಬ್ಬರಲ್ಲಿ ಒಬ್ಬರು ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿ ಮೂವರನ್ನು ಒಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆಯಂತು ಮುಂಬೈ ಮುಂದಿದೆ.
ಇದನ್ನೂ ಓದಿ: RCB… ಅದೊಂದು ತಂಡವೇ ಅಲ್ಲ: ಮಾಜಿ ಆಟಗಾರ ಕಿಡಿ
ಅದರಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಭಾರತೀಯ ಆಟಗಾರರ ರಿಟೈನ್ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲು ಮುಂದಾದರೆ, ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಬೀಳುವುದು ಬಹುತೇಕ ಖಚಿತ. ಅಲ್ಲದೆ ಸೂರ್ಯಕುಮಾರ್ ಯಾದವ್ ಅಥವಾ ರೋಹಿತ್ ಶರ್ಮಾಗೆ ತಂಡದ ನಾಯಕತ್ವ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.
Published On - 2:03 pm, Sat, 20 July 24