- Kannada News Photo gallery Cricket photos Gujarat Titans Stake Sale: Adani, Torrent eye majority stake in IPL
IPL 2025: ಗುಜರಾತ್ ಟೈಟಾನ್ಸ್ ಮಾರಾಟಕ್ಕಿದೆ: ಐಪಿಎಲ್ ಮೇಲೆ ಕಣ್ಣಿಟ್ಟಿ ಅದಾನಿ ಗ್ರೂಪ್
IPL 2025: ಮೂರು ವರ್ಷಗಳ ಹಿಂದೆ ಅದಾನಿ ಗ್ರೂಪ್ ಐಪಿಎಲ್ನಲ್ಲಿ ಗುಜರಾತ್ ಫ್ರಾಂಚೈಸಿಯ ತಂಡವನ್ನು ಖರೀದಿಸಲು ಮುಂದಾಗಿದ್ದರು. ಇದಕ್ಕಾಗಿ ಅದಾನಿ ಗ್ರೂಪ್ 5,100 ಕೋಟಿ ರೂ. ಬಿಡ್ಡಿಂಗ್ ಮಾಡಿದ್ದರು. ಆದರೆ CVC ಕ್ಯಾಪಿಟಲ್ ಪಾರ್ಟ್ನರ್ಸ್ 5625 ಕೋಟಿ ರೂ. ನೀಡುವ ಮೂಲಕ ಗುಜರಾತ್ ಫ್ರಾಂಚೈಸಿ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು.
Updated on: Jul 20, 2024 | 10:04 AM

CVC ಕ್ಯಾಪಿಟಲ್ ಪಾರ್ಟ್ನರ್ಸ್ ಮಾಲೀಕತ್ವದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತನ್ನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಐಪಿಎಲ್ನಲ್ಲಿ ಮೂರು ಸೀಸನ್ನಲ್ಲಿ ಆಡಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತನ್ನ ಷೇರಿನ ಬಹುಪಾಲನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಈ ಷೇರುಗಳ ಖರೀದಿಗೆ ಅದಾನಿ ಗ್ರೂಪ್ ಹಾಗೂ ಟೊರೆಂಟ್ ಗ್ರೂಪ್ ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ.

ಅದಾನಿ ಗ್ರೂಪ್ ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಹೊಂದಿದೆ. ಅಲ್ಲದೆ ಈ ಹಿಂದೆ ಐಪಿಎಲ್ ತಂಡಗಳ ಖರೀದಿಗೆ ಮುಂದಾದರೂ, ಬಿಡ್ಡಿಂಗ್ನಲ್ಲಿ ವಿಫಲವಾಗಿತ್ತು. ಇದೀಗ ಗುಜರಾತ್ ಟೈಟಾನ್ಸ್ ತಂಡವು ತನ್ನ ಷೇರುಗಳನ್ನು ಮಾರಾಟಕ್ಕಿರುವ ಕಾರಣ ಅದಾನಿ ಗ್ರೂಪ್ ಐಪಿಎಲ್ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.

2021 ರಲ್ಲಿ CVC ಕ್ಯಾಪಿಟಲ್ ಪಾರ್ಟ್ನರ್ಸ್ ಕಂಪೆನಿಯು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯನ್ನು ಬರೋಬ್ಬರಿ 5625 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ಮೂರು ವರ್ಷಗಳ ಬಳಿಕ ತಂಡದ ಮಾಲೀಕತ್ವದ ಬಹುಪಾಲನ್ನು ಮಾರಾಟ ಮಾಡಲು ಮುಂದಾಗಿರುವುದು ವಿಶೇಷ.

ಅದರಂತೆ ಮೂರು ವರ್ಷಗಳಷ್ಟು ಹಳೆಯದಾದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಮೌಲ್ಯ ಸುಮಾರು 1.5 ಶತಕೋಟಿ ಎನ್ನಲಾಗುತ್ತಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ನ ಷೇರನ್ನು ಯಾರು ಖರೀದಿಸಲಿದ್ದಾರೆ ಎಂಬುದೇ ಕುತೂಹಲ. ಏಕೆಂದರೆ ಹೊಸ ತಂಡಗಳು ಪಾಲನ್ನು ಮಾರಾಟ ಮಾಡಲು 2025ರ ಫೆಬ್ರವರಿವರೆಗೆ ಮಾತ್ರ ಅವಕಾಶವಿದೆ. ಅದಕ್ಕೂ ಮುನ್ನ ಡೀಲ್ ಕುದುರಿಸಿಕೊಳ್ಳಲು ಅದಾನಿ ಗ್ರೂಪ್ ಹಾಗೂ ಟೊರೆಂಟ್ ಗ್ರೂಪ್ CVC ಕ್ಯಾಪಿಟಲ್ ಪಾರ್ಟ್ನರ್ಸ್ ಜೊತೆಗೆ ಮಾತುಕತೆ ನಡೆಸಿದೆ.

ಒಂದು ವೇಳೆ ಅದಾನಿ ಗ್ರೂಪ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಬಹುಪಾಲನ್ನು ಖರೀದಿಸಿದರೆ, ತಂಡದ ಹೆಸರು ಬದಲಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಅದಾನಿ ಗ್ರೂಪ್ ಮಾಲೀಕತ್ವದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್, ಲೆಜೆಂಡ್ಸ್ ಕ್ರಿಕೆಟ್ ಲೀಗ್, ಪ್ರೋ ಕಬಡ್ಡಿ ಲೀಗ್ ಮತ್ತು ಅಲ್ಟಿಮೇಟ್ ಖೋ ಖೋ ಲೀಗ್ಗಳಲ್ಲಿ ಗುಜರಾತ್ ಜೈಂಟ್ಸ್ ಹೆಸರಿನ ತಂಡಗಳಿವೆ. ಹೀಗಾಗಿ ಗುಜರಾತ್ ಟೈಟಾನ್ಸ್ ಅದಾನಿ ಪಾಲಾದರೆ, ತಂಡದ ಹೆಸರು ಗುಜರಾತ್ ಜೈಂಟ್ಸ್ ಆಗಿ ಬದಲಾದರೂ ಅಚ್ಚರಿಪಡಬೇಕಿಲ್ಲ.
