ಎಸ್ಆರ್ಎಚ್ ತಂಡಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ ಅಭಿಷೇಕ್ ಶರ್ಮಾ..!
ಐಪಿಎಲ್ 2027 ಮಿನಿ ಹರಾಜಿಗೂ ಮುನ್ನ ಅಭಿಷೇಕ್ ಶರ್ಮಾ ಸನ್‌ರೈಸರ್ಸ್ ಹೈದರಾಬಾದ್ ತೊರೆಯುವ ಸಾಧ್ಯತೆಯಿದೆ. ನಾಯಕತ್ವದ ಆಕಾಂಕ್ಷಿಯಾಗಿದ್ದ ಶರ್ಮಾಗೆ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ನಾಯಕನಾಗುವುದರಿಂದ ಅಸಮಾಧಾನವಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಹಲವು ತಂಡಗಳು ಶರ್ಮಾ ಬಗ್ಗೆ ಆಸಕ್ತಿ ಹೊಂದಿವೆ. ಆದರೆ SRH ಸಿಇಒ ಈ ವರದಿಗಳನ್ನು ಅಲ್ಲಗಳೆದಿದ್ದಾರೆ.

2027 ರ ಐಪಿಎಲ್ಗಾಗಿ ಡಿಸೆಂಬರ್ ತಿಂಗಳಲ್ಲಿ ಮಿನಿ ಹರಾಜು ನಡೆಯಲಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಬೇಕಾಗಿದೆ. ಈ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮಿನಿ ಹರಾಜಿಗೂ ಮೊದಲು ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಸನ್‌ರೈಸರ್ಸ್ ತಂಡದಲ್ಲಿ ಸಾಕಷ್ಟು ವರ್ಷಗಳಿಂದ ಆಡುತ್ತಿರುವ ಅಭಿಷೇಕ್ ಅವರನ್ನು ನಾಯಕತ್ವದ ರೇಸ್ನಲ್ಲಿ ಕಡೆಗಣಿಸಿರುವುದು ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ಅಭಿಷೇಕ್ಗೆ ನಾಯಕತ್ವದ ಆಸೆ
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಅಭಿಷೇಕ್ ಶರ್ಮಾಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗುವ ಇರಾದೆಯಿದೆ. ಆದಾಗ್ಯೂ, ಕಳೆದ ಆವೃತ್ತಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡದ ಆಡಳಿತ ಮಂಡಳಿ ಇಶಾನ್ ಕಿಶನ್ ಅವರನ್ನು ನಾಯಕನನ್ನಾಗಿ ನೇಮಿಸಿತು. ಇದು ಅಭಿಷೇಕ್ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ. ಇನ್ನು ಮುಂದಿನ ಆವೃತ್ತಿಯಲ್ಲೂ ಪ್ಯಾಟ್ ಕಮ್ಮಿನ್ಸ್ ಹೈದರಾಬಾದ್ ತಂಡದಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಕಮ್ಮಿನ್ಸ್ ಅವರ ಅಂತರರಾಷ್ಟ್ರೀಯ ವೇಳಾಪಟ್ಟಿ. ಮುಂಬರುವ ಆಶಸ್ ಸರಣಿ ಮತ್ತು 2027 ರ ಏಕದಿನ ವಿಶ್ವಕಪ್‌ಗೆ ಆದ್ಯತೆ ನೀಡುವ ಬದ್ಧತೆಯಿಂದಾಗಿ ಕಮ್ಮಿನ್ಸ್ ಐಪಿಎಲ್ 2027 ರಿಂದ ಹಿಂದೆ ಸರಿಯಬಹುದು.
ಕಿಶನ್ಗೆ ಮಣೆ ಹಾಕಿದ ಫ್ರಾಂಚೈಸಿ
ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ಸನ್‌ರೈಸರ್ಸ್ ಹೈದರಾಬಾದ್ ಆಡಳಿತ ಮಂಡಳಿಯು ಇಶಾನ್ ಕಿಶನ್ ಅವರನ್ನು ಮತ್ತೆ ತಂಡದ ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ. ಆದರೆ 2019 ರಿಂದ ಹೈದರಾಬಾದ್ ತಂಡದಲ್ಲಿರುವ ಅಭಿಷೇಕ್ ತನಗೆ ನಾಯಕತ್ವ ಸಿಗದಿರುವುದಕ್ಕೆ ಅಸಮಾಧಾನಗೊಂಡಿದ್ದು, ಹೊಸ ತಂಡವನ್ನು ಆಯ್ಕೆ ಮಾಡುವ ಬಗ್ಗೆ ಹಲವಾರು ಫ್ರಾಂಚೈಸಿಗಳೊಂದಿಗೆ ಮಾತುಕತೆ ಈಗಾಗಲೇ ಆರಂಭಿಸಿದ್ದಾರೆ ಎಂದು ವರದಿ ಹೇಳುತ್ತದೆ.
ಜಪಾನ್ ವಿರುದ್ಧವೂ ಸೊನ್ನೆ ಸುತ್ತಿ ಅನಗತ್ಯ ದಾಖಲೆ ಬರೆದ ಅಭಿಷೇಕ್
ಅಭಿಷೇಕ್ಗಾಗಿ ಹಲವು ತಂಡಗಳ ಪೈಪೋಟಿ
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಅಭಿಷೇಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೂ ಅಭಿಷೇಕ್ ಮಾತುಕತೆ ನಡೆಸಿದ್ದಾರೆ ಎಂತಲೂ ಹೇಳಲಾಗುತ್ತಿದೆ. ಏಕೆಂದರೆ ಅಭಿಷೇಕ್ ಅವರ ಮಾರ್ಗದರ್ಶಕ ಮತ್ತು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈಗ ಡೆಲ್ಲಿಯ ತರಬೇತಿ ಮತ್ತು ಸಹಾಯಕ ಸಿಬ್ಬಂದಿಯ ಭಾಗವಾಗಿದ್ದಾರೆ. ಹೀಗಾಗಿ ಅಭಿಷೇಕ್ ಡೆಲ್ಲಿ ತಂಡವನ್ನು ಸೇರಿದರೂ ಸೇರಬಹುದು. ಈ ಎರಡು ತಂಡಗಳ ಜೊತೆಗೆ ಅಭಿಷೇಕ್ಗಾಗಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಹಿಂದೆ ಬಿದ್ದಿವೆ ಎಂದು ವರದಿಯಾಗಿದೆ. ಆದಾಗ್ಯೂ, ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕೆ. ಷಣ್ಮುಗಂ ಈ ಊಹಾಪೋಹಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅದೆನೇ ಇದ್ದರೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಚಿತ್ರಣ ಹೊರಬರಲಿದೆ.




