
2027 ರ ಐಪಿಎಲ್ ಮಿನಿ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ಮೂಲಕವೇ ಕೆಲವು ಆಟಗಾರರನ್ನು ತಮ್ಮ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿವೆ. ಈ ನಡುವೆ ಐಪಿಎಲ್ ಬಗ್ಗೆ ಮಹತ್ವದ ಗಾಳಿ ಸುದ್ದಿಯೊಂದು ಹುಟ್ಟಿಕೊಂಡಿತ್ತು. ಅದೇನೆಂದರೆ 2028 ರ ಐಪಿಎಲ್ನಿಂದ 10 ತಂಡಗಳ ಬದಲಿಗೆ 12 ತಂಡಗಳು ಕಣಕ್ಕಿಳಿಯುತ್ತವೆ ಎಂಬುದು. ಆದರೀಗ ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟನೆ ನೀಡಿದ್ದು, ಐಪಿಎಲ್‌ನಲ್ಲಿ ಈಗಿರುವ 10 ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಬಿಸಿಸಿಐ ಮುಂದಿಲ್ಲ. ಈ ಬಗ್ಗೆ ಮಂಡಳಿಯಲ್ಲಿ ಅನೌಪಚಾರಿಕವಾಗಿಯೂ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ಜಾಗತಿಕ ಕ್ರಿಕೆಟ್ ಮಾರುಕಟ್ಟೆಯಲ್ಲಿ ಐಪಿಎಲ್‌ಗೆ ಭಾರಿ ಬೇಡಿಕೆ ಮತ್ತು ಆಸಕ್ತಿ ಇದ್ದರೂ, ಸದ್ಯಕ್ಕೆ ಟೂರ್ನಿಯಲ್ಲಿ ಹೊಸ ತಂಡಗಳನ್ನು ಸೇರ್ಪಡೆಗೊಳಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೈಕಿಯಾ, ‘2028ರಲ್ಲಿ ಐಪಿಎಲ್ ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸುವ ಬಗ್ಗೆ ನಾವು ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಯಾವುದೇ ಚರ್ಚೆ ನಡೆಸಿಲ್ಲ. ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ನಮ್ಮ ಗಮನ ಸದ್ಯ 2027ರ ಐಪಿಎಲ್ ಮೇಲೆ ಮಾತ್ರ ಇದೆ. ಅದು ಐಪಿಎಲ್‌ನ 20ನೇ ಆವೃತ್ತಿಯಾಗಿರುವುದರಿಂದ ವಿಶೇಷ ಮಹತ್ವ ಪಡೆದುಕೊಂಡಿದೆ. ಅದನ್ನು ಅದ್ಧೂರಿಯಾಗಿ ಆಯೋಜಿಸುವುದರತ್ತ ನಾವು ಗಮನಹರಿಸಿದ್ದೇವೆ. ಅದನ್ನು ಹೊರತುಪಡಿಸಿ ಮುಂದಿನ ಯಾವುದೇ ಯೋಜನೆಗಳ ಬಗ್ಗೆ ಈಗ ಯೋಚಿಸುತ್ತಿಲ್ಲ’ ಎಂದು ಹೇಳಿದ್ದಾರೆ.
ಐಪಿಎಲ್ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ‘ಇವೆಲ್ಲವೂ ಕೆಲವರ ಕಲ್ಪನೆಯಿಂದ ಹುಟ್ಟಿಕೊಂಡಿರುವ ಊಹಾಪೋಹದ ವರದಿಗಳು. ಇಂತಹ ಸುದ್ದಿಗಳಿಗೆ ಯಾವುದೇ ಅಧಿಕೃತ ಆಧಾರವಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, 2027ರ ಮೆಗಾ ಹರಾಜಿಗೂ ಮುನ್ನ ಐಪಿಎಲ್ ತಂಡಗಳ ಆಟಗಾರರ ಖರೀದಿ ಮೊತ್ತದ ಮಿತಿಯನ್ನು ಈಗಿರುವ 125 ಕೋಟಿ ರೂ.ನಿಂದ 150 ಕೋಟಿ ರೂ.ಗೆ ಹೆಚ್ಚಿಸಲಾಗುತ್ತದೆ ಎಂಬ ವರದಿಗಳಿಗೂ ಸೈಕಿಯಾ ತೆರೆ ಎಳೆದಿದ್ದು, ‘ತಂಡಗಳ ಆಟಗಾರರ ಖರೀದಿ ಮೊತ್ತದ ಮಿತಿಯನ್ನು ಹೆಚ್ಚಿಸುವ ಕುರಿತು ಯಾವುದೇ ನಿರ್ಧಾರವಾಗಿಲ್ಲ. ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದೆ. ಆದರೆ ಈ ಬಾರಿ ಮೆಗಾ ಹರಾಜು ಇರುವುದಿಲ್ಲ. ಡಿಸೆಂಬರ್ 16ರಂದು ನಡೆಯಲಿರುವ ಹರಾಜು ಪ್ರಸ್ತುತ ಚಕ್ರದ ಕೊನೆಯ ಹರಾಜಾಗಿದೆ. ಆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಹಳೆಯ ಲೆಕ್ಕಾಚಾರ ಬಿಟ್ಟು, ಐಪಿಎಲ್‌ಗೆ ಹೊಸ ವೇಳಾಪಟ್ಟಿ ರೂಪಿಸಿ: ಲಲಿತ್ ಮೋದಿ
ಐಪಿಎಲ್ ಪಂದ್ಯಾವಳಿಯನ್ನು ಪ್ರಸ್ತುತ ಏಪ್ರಿಲ್-ಮೇ ತಿಂಗಳ ಬದಲಿಗೆ ಜನವರಿಯಲ್ಲಿ ನಡೆಸುವಂತೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಮಾಲೀಕಿ ಹಾಗೂ ಬಾಲಿವುಡ್ ನಟಿ ಜೂಹಿ ಚಾವ್ಲಾ ಇತ್ತೀಚೆಗೆ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಸೈಕಿಯಾ, ‘ನಮ್ಮ ಸದ್ಯದ ಗಮನ 2027ರ ಐಪಿಎಲ್ ಆಯೋಜನೆಯ ಮೇಲಿದೆ. ಈ ಟೂರ್ನಿ ಮಾರ್ಚ್ 2027ರಲ್ಲಿ ಆರಂಭವಾಗಲಿದೆ. ಸದ್ಯಕ್ಕೆ ಅಷ್ಟೇ ನಮ್ಮ ಗಮನ’ ಎಂದು ಹೇಳಿದ್ದಾರೆ.
Published On - 8:04 pm, Wed, 11 November 26