IPL Retention 2025: ಕನ್ನಡಿಗ ಕೆಎಲ್ ರಾಹುಲ್​ರನ್ನು ಮತ್ತೊಮ್ಮೆ ಅವಮಾನಿಸಿದ ಲಕ್ನೋ ಮಾಲೀಕ

|

Updated on: Nov 01, 2024 | 9:49 AM

KL Rahul Dropped: ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2025ರ ಮೆಗಾ ಹರಾಜಿಗೆ ಮುನ್ನ ಕೆಎಲ್ ರಾಹುಲ್ ಅವರನ್ನು ಬಿಟ್ಟು 5 ಆಟಗಾರರನ್ನು ಉಳಿಸಿಕೊಂಡಿದೆ. ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟಿರುವ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಪರೋಕ್ಷವಾಗಿ ರಾಹುಲ್​ರನ್ನು ಜರಿದಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಅಲ್ಲ, ಗೆಲುವಿನ ಮನಸ್ಥಿತಿ ಹೊಂದಿರುವ ಮತ್ತು ತಂಡಕ್ಕಾಗಿ ಆಡುವ ಅಂತಹ ಆಟಗಾರರನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ. ಗೋಯೆಂಕಾ ಅವರ ಈ ಹೇಳಿಕೆ ಇಬ್ಬರ ನಡುವಿನ ಮನಸ್ತಾಪವನ್ನು ಮತ್ತೆ ಬಹಿರಂಗವಾಗಿಸಿದೆ.

IPL Retention 2025: ಕನ್ನಡಿಗ ಕೆಎಲ್ ರಾಹುಲ್​ರನ್ನು ಮತ್ತೊಮ್ಮೆ ಅವಮಾನಿಸಿದ ಲಕ್ನೋ ಮಾಲೀಕ
ಕೆಎಲ್ ರಾಹುಲ್, ಸಂಜೀವ್ ಗೋಯೆಂಕಾ
Follow us on

ಐಪಿಎಲ್ 2025ರ ಮೆಗಾ ಹರಾಜಿಗೂ ಮೊದಲು ಎಲ್ಲಾ ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಪ್ರಕಟಿಸಿವೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ಒಟ್ಟು 5 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ಮೂವರು ಕ್ಯಾಪ್ಡ್ ಆಟಗಾರರಿದ್ದರೆ, ಇನ್ನಿಬ್ಬರು ಅನ್‌ಕ್ಯಾಪ್ಡ್ ಆಟಗಾರರು ಸೇರಿದ್ದಾರೆ. ಆದರೆ ತಂಡದಲ್ಲಿ ಉಳಿದುಕೊಂಡಿರುವ ಆಟಗಾರರ ಪಟ್ಟಿಯಲ್ಲಿ ತಂಡದ ನಾಯಕ ಕೆಎಲ್ ರಾಹುಲ್ ಹೆಸರಿಲ್ಲ. ಇದರರ್ಥ ರಾಹುಲ್ ಲಕ್ನೋ ತಂಡದಿಂದ ಹೊರಬಂದಿದ್ದು, ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟ ತಕ್ಷಣ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಸಾರ್ವಜನಿಕವಾಗಿ ಹರಿಬಿಟ್ಟಿರುವ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಅವರು ರಾಹುಲ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಆದರೆ, ತಮ್ಮ ಹೇಳಿಕೆಯಲ್ಲಿ ರಾಹುಲ್ ಹೆಸರನ್ನು ನೇರವಾಗಿ ತೆಗೆದುಕೊಳ್ಳದೆ ಪರೋಕ್ಷವಾಗಿ ಚುಚ್ಚು ಮಾತಿನಿಂದ ಕನ್ನಡಿಗನನ್ನು ನಿಂಧಿಸಿದ್ದಾರೆ.

ರಾಹುಲ್ ವಿರುದ್ಧ ಗುಡುಗಿದ ಸಂಜೀವ್

ವಾಸ್ತವವಾಗಿ ಕೆಎಲ್ ರಾಹುಲ್ ಕಳೆದ ಮೂರು ಆವೃತ್ತಿಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು. ಈ ಅವಧಿಯಲ್ಲಿ ಲಕ್ನೋ ಎರಡು ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಎರಡೂ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ ಕಳೆದ ಸೀಸನ್​ನಲ್ಲಿ ತಂಡದ ಪ್ರದರ್ಶನ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಏಳರಲ್ಲಿ ಸೋತು, ತಂಡ 7ನೇ ಸ್ಥಾನದೊಂದಿಗೆ ಟೂರ್ನಿ ಮುಗಿಸಿತ್ತು. ಹೀಗಾಗಿ ತಂಡದ ನಾಯಕ ರಾಹುಲ್​ರನ್ನು ತಂಡದಿಂದ ಬಿಡುಗಡೆ ಮಾಡಲು ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಿರ್ಧರಿಸಿದ್ದಾರೆ.

ಈ ಬಗ್ಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಸಂಜೀವ್, ರಾಹುಲ್ ಅವರ ಹೆಸರನ್ನು ನೇರವಾಗಿ ತೆಗೆದುಕೊಳ್ಳದೆ ಚುಚ್ಚು ಮಾತನಿಂದಲೇ ನಿಂದಿಸಿದ್ದಾರೆ. ಉಳಿಸಿಕೊಂಡಿರುವ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಸಂಜೀವ್, ‘ತಮ್ಮ ಹಿತಾಸಕ್ತಿಗಾಗಿ ಅಲ್ಲ, ಗೆಲುವಿನ ಮನಸ್ಥಿತಿ ಹೊಂದಿರುವ ಮತ್ತು ತಂಡಕ್ಕಾಗಿ ಆಡುವಂತಹ ಆಟಗಾರರನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ. ಸಂಜೀವ್ ಅವರ ಈ ಹೇಳಿಕೆ ಸಂಚಲನ ಮೂಡಿಸಿದ್ದು, ಈ ಹೇಳಿಕೆಯ ಮೂಲಕ ಅವರು ಕೆಎಲ್ ರಾಹುಲ್​ಗೆ ಅವಮಾನ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

ಇಬ್ಬರ ನಡುವೆ ಮನಸ್ತಾಪ

ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಗೋಯೆಂಕಾ ಅವರು ರಾಹುಲ್‌ಗೆ ಮೈದಾನದಲ್ಲಿಯೇ ಛೀಮಾರಿ ಹಾಕಿದ್ದರು. ಆದಾಗ್ಯೂ, ನಂತರ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಕೆಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲು ತಂಡದ ಮಾಲೀಕರು ಮತ್ತು ಆಡಳಿತ ಮಂಡಳಿ ಒಲವು ತೋರಲಿಲ್ಲ. ಮತ್ತೊಂದೆಡೆ, ರಾಹುಲ್ ಅವರೇ ತಂಡದಲ್ಲಿ ಉಳಿದುಕೊಳ್ಳಲು ನಿರಾಕರಿಸಿದ್ದಾರೆ ಎಂಬ ವರದಿಗಳೂ ಹೊರಬಿದ್ದಿವೆ.

ಯಾರು ಇನ್, ಯಾರು ಔಟ್?

ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪುರನ್ ಅವರನ್ನು 21 ಕೋಟಿ ರೂ.ಗೆ, ರವಿ ಬಿಷ್ಣೋಯ್ ಮತ್ತು ಮಯಾಂಕ್ ಯಾದವ್​ವರನ್ನು ತಲಾ 11 ಕೋಟಿ ರೂ.ಗೆ ಉಳಿಸಿಕೊಂಡಿದೆ. ಇವರಲ್ಲದೆ, ಇಬ್ಬರು ಅನ್‌ಕ್ಯಾಪ್ಡ್ ಆಟಗಾರರಾದ ಮೊಹ್ಸಿನ್ ಖಾನ್ ಮತ್ತು ಆಯುಷ್ ಬಡೋನಿ ಅವರನ್ನು ಉಳಿಸಿಕೊಳ್ಳಲಾಗಿದ್ದು, ಅವರಿಗೆ ತಲಾ 4 ಕೋಟಿ ರೂ. ನೀಡಲಾಗಿದೆ. ಇವರನ್ನು ಹೊರತುಪಡಿಸಿ ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ನವೀನ್-ಉಲ್-ಹಕ್ ಅವರಂತಹ ಹಲವು ದೊಡ್ಡ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 am, Fri, 1 November 24