Irani Cup 2024: ಸರ್ಫರಾಝ್, ರಹಾನೆ, ಅಯ್ಯರ್ ಅರ್ಧಶತಕ: ಮುಂಬೈ ತಂಡದ ಮೇಲುಗೈ

|

Updated on: Oct 01, 2024 | 6:15 PM

Irani Cup 2024: ಇರಾನಿ ಕಪ್​ನಲ್ಲಿ ಹಾಲಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತದೆ. ಅಂದರೆ ಇಲ್ಲಿ ಶೇಷ ಭಾರತ ತಂಡದಲ್ಲಿ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ. ಅದರಂತೆ ಇದೀಗ ಶೇಷ ಭಾರತ ತಂಡ ಹಾಗೂ ರಣಜಿ ಚಾಂಪಿಯನ್ ಮುಂಬೈ ತಂಡ ಮುಖಾಮುಖಿಯಾಗಿದೆ.

Irani Cup 2024: ಸರ್ಫರಾಝ್, ರಹಾನೆ, ಅಯ್ಯರ್ ಅರ್ಧಶತಕ: ಮುಂಬೈ ತಂಡದ ಮೇಲುಗೈ
Sarfaraz Khan
Follow us on

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇರಾನಿ ಕಪ್ (Irani Cup 2024) ಪಂದ್ಯದ ಮೊದಲ ದಿನದಾಟದಲ್ಲಿ ಮುಂಬೈ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕರಾದ ಪೃಥ್ವಿ ಶಾ (4) ಹಾಗೂ ಆಯುಷ್ (19) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಹಾರ್ದಿಕ್ ತಮೋರೆ (0) ಮುಖೇಶ್ ಕುಮಾರ್ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಶ್ರೇಯಸ್ ಅಯ್ಯರ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 84 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 57 ರನ್ ಸಿಡಿಸಿದರು. ಇನ್ನು ಐದನೇ ಕ್ರಮಾಂಕದಲ್ಲಿ ಕಣ್ಕಕಿಳಿದ ಸರ್ಫರಾಝ್ ಖಾನ್ 88 ಎಸೆತಗಳನ್ನು ಎದುರಿಸಿ ಅಜೇಯ 54 ರನ್​ ಚಚ್ಚಿದರು.

ಈ ಮೂಲಕ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಮುಂಬೈ ತಂಡವು 4 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ 197 ಎಸೆತಗಳಲ್ಲಿ 86 ರನ್ ಬಾರಿಸಿರುವ ಅಜಿಂಕ್ಯ ರಹಾನೆ ಹಾಗೂ ಸರ್ಫರಾಝ್ ಖಾನ್ (54) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶೇಷ ಭಾರತ ತಂಡದ ಪರ ಮುಖೇಶ್ ಕುಮಾರ್ 3 ವಿಕೆಟ್ ಪಡೆದರೆ, ಯಶ್ ದಯಾಳ್ ಒಂದು ವಿಕೆಟ್ ಕಬಳಿಸಿದ್ದಾರೆ.

ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಆಯುಷ್ ಮ್ಹಾತ್ರೆ , ಶ್ರೇಯಸ್ ಅಯ್ಯರ್ , ಅಜಿಂಕ್ಯ ರಹಾನೆ (ನಾಯಕ) , ಸರ್ಫರಾಝ್ ಖಾನ್ , ಹಾರ್ದಿಕ್ ತಮೋರೆ (ವಿಕೆಟ್ ಕೀಪರ್) , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಎಂ ಜುನೇದ್ ಖಾನ್.

ಇದನ್ನೂ ಓದಿ: ಹೆಚ್ಚುವರಿ 36 ಎಸೆತಗಳಿಂದ ಟೀಮ್ ಇಂಡಿಯಾ ಕೈ ತಪ್ಪಿದ ಸಾರ್ವಕಾಲಿಕ ಶ್ರೇಷ್ಠ ದಾಖಲೆ

ಶೇಷ ಭಾರತ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ) , ದೇವದತ್ ಪಡಿಕ್ಕಲ್ , ಅಭಿಮನ್ಯು ಈಶ್ವರನ್ , ಸಾಯಿ ಸುದರ್ಶನ್ , ಇಶಾನ್ ಕಿಶನ್ , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ಸರನ್ಶ್ ಜೈನ್ , ಯಶ್ ದಯಾಳ್ , ಪ್ರಸಿದ್ಧ್ ಕೃಷ್ಣ , ಮುಖೇಶ್ ಕುಮಾರ್.