
ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಅಮೋಘ ಗೆಲುವು ದಾಖಲಿಸಿದೆ. ಡ್ರಾನಲ್ಲಿ ಅಂತ್ಯಗೊಳ್ಳಬೇಕಿದ್ದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಟೀಮ್ ಇಂಡಿಯಾ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿತು. ಈ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಭಾರತ ತಂಡ ಹಲವು ದಾಖಲೆಗಳನ್ನು ಬರೆದರೂ, ಒಂದು ಸಾರ್ವಕಾಲಿಕ ದಾಖಲೆ ಕೈ ತಪ್ಪಿ ಹೋಗಿದೆ. ಅದು ಸಹ ಕೇವಲ 36 ಎಸೆತಗಳಿಂದ ಎಂಬುದೇ ಇಲ್ಲಿ ವಿಶೇಷ.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡು ಇನಿಂಗ್ಸ್ಗಳು ಸೇರಿ ಅತೀ ಕಡಿಮೆ ಎಸೆತಗಳನ್ನು ಎದುರಿಸಿ ಪಂದ್ಯ ಗೆದ್ದ ವಿಶ್ವ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿದೆ. ಈ ದಾಖಲೆ ನಿರ್ಮಾಣವಾಗಿರುವುದು 1935 ರಲ್ಲಿ. ಅಂದು ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 276 ಎಸೆತಗಳಲ್ಲಿ (ಎರಡು ಇನಿಂಗ್ಸ್ ಸೇರಿ) ಜಯಭೇರಿ ಬಾರಿಸಿದ್ದರು.

ಈ ಸಾರ್ವಕಾಲಿಕ ದಾಖಲೆ ಮುರಿಯುವ ಅವಕಾಶ ಟೀಮ್ ಇಂಡಿಯಾ ಮುಂದಿತ್ತು. ಬಾಂಗ್ಲಾದೇಶ್ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 208 ಎಸೆತಗಳನ್ನು ಎದುರಿಸಿದ್ದ ಭಾರತೀಯ ಬ್ಯಾಟರ್ಗಳು 285 ರನ್ ಕಲೆಹಾಕಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 95 ರನ್ಗಳನ್ನು ಪಡೆದಿದ್ದರು. ಈ ಗುರಿಯನ್ನು ಬೆನ್ನತ್ತಲು ಟೀಮ್ ಇಂಡಿಯಾ 104 ಎಸೆತಗಳನ್ನು ತೆಗೆದುಕೊಂಡರು.

ಅಂದರೆ ಎರಡು ಇನಿಂಗ್ಸ್ಗಳ ಮೂಲಕ ಟೀಮ್ ಇಂಡಿಯಾ 312 ಎಸೆತಗಳನ್ನು ಎದುರಿ ಗುರಿ ಮುಟ್ಟಿದ್ದರು. ಒಂದು ವೇಳೆ ಭಾರತೀಯ ಬ್ಯಾಟರ್ಗಳು ದ್ವಿತೀಯ ಇನಿಂಗ್ಸ್ನಲ್ಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ ಪಂದ್ಯ ಗೆದ್ದ ವಿಶ್ವ ದಾಖಲೆ ನಿರ್ಮಿಸಬಹುದಿತ್ತು.

ಆದರೆ ಹೆಚ್ಚುವರಿ 36 ಎಸೆತಗಳನ್ನು ಎದುರಿಸುವ ಮೂಲಕ ಟೀಮ್ ಇಂಡಿಯಾ ಬ್ಯಾಟರ್ಗಳು ಸಾರ್ವಕಾಲಿಕ ದಾಖಲೆ ಬರೆಯುವ ಅವಕಾಶವನ್ನು ಕೈ ತಪ್ಪಿಕೊಂಡಿಸಿದೆ. ಇದಾಗ್ಯೂ ಬಾಂಗ್ಲಾದೇಶ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ತವರಿನಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದ ವಿಶೇಷ ಸಾಧನೆ ಮಾಡಿದೆ.