ಟೀಂ ಇಂಡಿಯಾವನ್ನು ಸೋಲಿಸಿದ ಬೆನ್ನಲ್ಲೇ ಐರ್ಲೆಂಡ್ ಕೋಚ್ ರಾಜೀನಾಮೆ

Ireland cricket coach: ಐರ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹೆನ್ರಿಕ್ ಮಲನ್, ಭಾರತದ ವಿರುದ್ಧದ ಐತಿಹಾಸಿಕ ಟಿ20 ಸರಣಿ ಗೆಲುವಿನ ಬೆನ್ನಲ್ಲೇ ಅಚ್ಚರಿಯ ರಾಜೀನಾಮೆ ನೀಡಿದ್ದಾರೆ. 2027ರವರೆಗೆ ಒಪ್ಪಂದವಿದ್ದರೂ, ಹೊಸ ಕೋಚ್‌ಗೆ ತಂಡವನ್ನು ಸಿದ್ಧಪಡಿಸಲು ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಲನ್ ತಿಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಐರ್ಲೆಂಡ್ ಅನೇಕ ಯಶಸ್ಸುಗಳನ್ನು ಕಂಡಿದೆ, ಇತ್ತೀಚಿನ ಭಾರತ ಸರಣಿ ಗೆಲುವು ಸ್ಮರಣೀಯ ಅಂತ್ಯವಾಗಿದೆ.

ಟೀಂ ಇಂಡಿಯಾವನ್ನು ಸೋಲಿಸಿದ ಬೆನ್ನಲ್ಲೇ ಐರ್ಲೆಂಡ್ ಕೋಚ್ ರಾಜೀನಾಮೆ
Heinrich Malan

Updated on: Jun 29, 2026 | 4:54 PM

ಬಲಿಷ್ಠ ಟೀಂ ಇಂಡಿಯಾವನ್ನು ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್ ವಾಶ್ ಮಾಡಿದ ಸಂತಸದಲ್ಲಿದ್ದ ಐರ್ಲೆಂಡ್ (India vs Ireland) ತಂಡಕ್ಕೆ ಆಘಾತ ಎದುರಾಗಿದೆ. ತಂಡವನ್ನು ಈ ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ಮುಖ್ಯ ಕೋಚ್ ಹೆನ್ರಿಕ್ ಮಲನ್ (Heinrich Malan) ಇದ್ದಕ್ಕಿದ್ದಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕ್ರಿಕೆಟ್ ಐರ್ಲೆಂಡ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್‌ನಲ್ಲಿ ಮುಖ್ಯ ಕೋಚ್ ರಾಜೀನಾಮೆಯ ವಿಚಾರವನ್ನು ಹಂಚಿಕೊಂಡಿದೆ. ಕೋಚ್ ಹೆನ್ರಿಕ್ ಮಲನ್ ಅವರ ಈ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಜೂನ್ 28 ರ ಭಾನುವಾರ ಬೆಲ್‌ಫಾಸ್ಟ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಐರ್ಲೆಂಡ್, ಭಾರತವನ್ನು 1 ರನ್‌ನಿಂದ ಸೋಲಿಸಿತು. ಇದರೊಂದಿಗೆ, ಐರಿಶ್ ತಂಡವು ಎರಡು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾವನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಇದು ಐರಿಶ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಸರಣಿ ಗೆಲುವು. ಹೀಗಾಗಿ ಐರಿಶ್ ಕ್ರಿಕೆಟ್ ತಂಡ, ಅದರ ಅಭಿಮಾನಿಗಳು ಮತ್ತು ಸ್ಥಳೀಯ ಮಾಧ್ಯಮಗಳು ಈ ವಿಜಯವನ್ನು ಆಚರಿಸುವ ಹೊತ್ತಲ್ಲೇ, ಜೂನ್ 29 ರ ಸೋಮವಾರದಂದು ಕೋಚ್ ಹೆನ್ರಿಕ್ ಮಲನ್ ಅವರ ರಾಜೀನಾಮೆಯ ಸುದ್ದಿ ಹೊರಬಿದ್ದಿದೆ.

ಮಲನ್ ರಾಜೀನಾಮೆಗೆ ಕಾರಣವೇನು?

ಈಗ ಪ್ರಶ್ನೆ ಏನೆಂದರೆ, ಇಷ್ಟು ದೊಡ್ಡ ಗೆಲುವಿನ ನಂತರ ಮಲನ್ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಲು ಏಕೆ ನಿರ್ಧರಿಸಿದರು? ಎಂಬುದು. ಕ್ರಿಕೆಟ್ ಐರ್ಲೆಂಡ್ ಪ್ರಕಾರ, ಮಲನ್ ಅವರ ಒಪ್ಪಂದವು 2027 ರವರೆಗೆ ಇತ್ತು, ಆದರೆ ಅವರು ಅವಧಿಗೂ ಮೊದಲೇ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತಂಡದೊಂದಿಗೆ ಮಾಡಿದ ಸಾಧನೆಗಳಿಂದ ತಾನು ಸಂತೋಷವಾಗಿದ್ದೇನೆ ಎಂದು ಮಲನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಮುಂಬರುವ ವರ್ಷಗಳಿಗೆ ತಯಾರಿ ನಡೆಸಲು ಹೊಸ ತರಬೇತುದಾರರಿಗೆ ಈಗಲೇ ಸಮಯ ನೀಡುವುದು ಮುಖ್ಯ. ಹೀಗಾಗಿ ನಾನು ಅವಧಿಗೂ ಮುನ್ನವೇ ರಾಜೀನಾಮೆ ನೀಡುತ್ತಿರುವುದಾಗಿ ಮಲನ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸೋತು ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಟೀಂ ಇಂಡಿಯಾ

ಮಲನ್ ವೃತ್ತಿಜೀವನ ಹೇಗಿತ್ತು?

ಮಲನ್ ಅವರ ತರಬೇತಿ ದಾಖಲೆಯ ಬಗ್ಗೆ ಹೇಳುವುದಾದರೆ, 2022 ರಲ್ಲಿ ಐರಿಶ್ ತಂಡವನ್ನು ಸೇರಿದ ಮಲನ್ ಅಂದಿನಿಂದ, ಐರ್ಲೆಂಡ್ ನಾಲ್ಕು ವರ್ಷಗಳಲ್ಲಿ ಎಲ್ಲಾ ಮೂರು ಟಿ20 ವಿಶ್ವಕಪ್‌ಗಳಿಗೆ ಅರ್ಹತೆ ಪಡೆಯಿತು. ಹಾಗೆಯೇ ಈ ಅವಧಿಯಲ್ಲಿ ಐರ್ಲೆಂಡ್ ತಂಡ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದಿತು. ಐರಿಶ್ ತಂಡದ ಮತ್ತೊಂದು ಸಾಧನೆಯೆಂದರೆ 2022 ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಇದರ ಜೊತೆಗೆ ಇತ್ತೀಚೆಗೆ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳ ವಿರುದ್ಧವೂ ಗೆಲುವು ದಾಖಲಿಸಿದೆ. ಇದೀಗ ಮಲನ್ ಅವರ ಪ್ರಯಾಣವು ಸ್ಮರಣೀಯ ಗೆಲುವಿನೊಂದಿಗೆ ಕೊನೆಗೊಂಡಿದ್ದು, ವಿಶ್ವ ಚಾಂಪಿಯನ್ ಭಾರತವನ್ನು ಸೋಲಿಸಿದ ಐರ್ಲೆಂಡ್ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us