ಏಷ್ಯಾಕಪ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 30 ರಿಂದ ಶುರುವಾಗಲಿರುವ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನಕ್ಕಾಗಿ ಈಗಾಗಲೇ ಬಾಂಗ್ಲಾದೇಶ್, ಪಾಕಿಸ್ತಾನ್ ಹಾಗೂ ನೇಪಾಳ ತಮ್ಮ ತಂಡಗಳನ್ನು ಘೋಷಿಸಿದೆ. ಇದಾಗ್ಯೂ ಬಿಸಿಸಿಐ ಆಯ್ಕೆ ಸಮಿತಿ ಭಾರತ ತಂಡದ ಅಂತಿಮ ಪಟ್ಟಿ ಸಿದ್ಧಪಡಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಲ ಆಟಗಾರರ ಗಾಯದ ಸಮಸ್ಯೆ.
ಇಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಟೆಸ್ಟ್ ರಿಪೋರ್ಟ್ಗಾಗಿ ಆಯ್ಕೆ ಸಮಿತಿ ಕಾಯುತ್ತಿದೆ. ಈ ವರದಿ ಬಂದ ಬೆನ್ನಲ್ಲೇ ಟೀಮ್ ಇಂಡಿಯಾ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮುಂಬರುವ ಏಷ್ಯಾಕಪ್ಗಾಗಿ ಆಯ್ಕೆ ಮಾಡಲಾಗುವ ಟೀಮ್ ಇಂಡಿಯಾದಲ್ಲಿ ತಿಲಕ್ ವರ್ಮಾ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಯುವ ಆಟಗಾರ ನೀಡಿದ ಅದ್ಭುತ ಪ್ರದರ್ಶನ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದ ತಿಲಕ್ ವರ್ಮಾ 5 ಇನಿಂಗ್ಸ್ಗಳಲ್ಲಿ ಒಂದು ಅರ್ಧಶತಕ ಮತ್ತು ಅಜೇಯ 49 ಸೇರಿದಂತೆ 57.33 ಸರಾಸರಿಯಲ್ಲಿ 173 ರನ್ ಕಲೆಹಾಕಿದ್ದಾರೆ. ಹಾಗೆಯೇ ಒಂದು ವಿಕೆಟ್ ಕೂಡ ಪಡೆದಿದ್ದಾರೆ.
ಅಂದರೆ ಅನುಭವಿ ಆಟಗಾರರೇ ವಿಫಲರಾಗಿದ್ದ ಪಿಚ್ನಲ್ಲಿ ತಿಲಕ್ ವರ್ಮಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ್ದರು. ಹೀಗಾಗಿಯೇ ಏಷ್ಯಾಕಪ್ನಲ್ಲಿ ಎಡಗೈ ದಾಂಡಿಗನಾಗಿ ತಿಲಕ್ ವರ್ಮಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಆಯ್ಕೆ ಸಮಿತಿ ಚಿಂತನೆ ನಡೆಸಿದೆ.
ಏಕೆಂದರೆ ಈ ಹಿಂದೆ ಮಧ್ಯಮ ಕ್ರಮಾಂಕದಲ್ಲಿ ಎಡಗೈ ದಾಂಡಿಗನಾಗಿ ಕಾಣಿಸಿಕೊಳ್ಳುತ್ತಿದ್ದ ರಿಷಭ್ ಪಂತ್ ಪ್ರಸ್ತುತ ತಂಡದಲ್ಲಿಲ್ಲ. ಹೀಗಾಗಿ ಆ ಸ್ಥಾನವನ್ನು ತಿಲಕ್ ವರ್ಮಾ ತುಂಬುವ ವಿಶ್ವಾಸ ಮೂಡಿಸಿದ್ದಾರೆ. ಇಲ್ಲಿ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಿದರೆ ತಿಲಕ್ ವರ್ಮಾ ಅವರನ್ನು ಆಲ್ರೌಂಡರ್ ಆಗಿ ಬಳಸಿಕೊಳ್ಳಬಹುದು. ಹೀಗಾಗಿಯೇ ಇದೀಗ ತಿಲಕ್ ವರ್ಮಾ ಏಷ್ಯಾಕಪ್ಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಹಾಗೆಯೇ ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮಾಡಿದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಅಂದರೆ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುವ ನಾಲ್ವರು ಬಲಗೈ ಬ್ಯಾಟರ್ಗಳು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ 5ನೇ ಸ್ಥಾನದಲ್ಲಿ ಆಡಿದರೆ, ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು. ಅಲ್ಲದೆ 7ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಕಣಕ್ಕಿಳಿಯಲಿದ್ದಾರೆ.
ಇಲ್ಲಿ 7 ಕ್ರಮಾಂಕದವರೆಗೆ ಇರುವುದು ಏಕೈಕ ಎಡಗೈ ದಾಂಡಿಗ (ರವೀಂದ್ರ ಜಡೇಜಾ). ಹಾಗೆಯೇ ಇಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಆಲ್ರೌಂಡರ್ಗಳು. ಹೀಗಾಗಿ ಮೂವರು ಬೌಲರ್ಗಳನ್ನು ಕಣಕ್ಕಿಳಿಸಿ ಐವರಿಂದ ಬೌಲಿಂಗ್ ಮಾಡಿಸಬಹುದು.
ಈ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ಎಡಗೈ ದಾಂಡಿಗನಾಗಿ ಕಣಕ್ಕಿಳಿಸಬಹುದು. ಅಲ್ಲದೆ 6ನೇ ಬೌಲರ್ ಆಗಿಯೂ ಬಳಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಏಷ್ಯಾಕಪ್ ಬಳಗದಲ್ಲಿ ತಿಲಕ್ ವರ್ಮಾ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.