ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿದೆ. ಬಿಸಿಸಿಐ ತಮ್ಮ ಒಪ್ಪಂದದ ಆಟಗಾರರು ರಣಜಿ ಟ್ರೋಫಿಯನ್ನು ಆಡಬೇಕೆಂದು ಖಡಕ್ ಆಗಿ ಹೇಳಿತ್ತು. ಈ ಬಗ್ಗೆ ಪ್ರತಿ ಆಟಗಾರರಿಗೆ ಪತ್ರ ಬರೆದು ಸೂಚಿಸಿತ್ತು. ಜಯ್ ಶಾ ಕೂಡ ಭಾರತ ತಂಡದಿಂದ ಹೊರಗುಳಿದವರು ರಣಜಿ ಆಡಲೇಬೇಕು ಎಂದು ಹೇಳಿದ್ದರು. ಆದರೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಇದಕ್ಕೆ ಗಮನ ಕೊಡದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.
ಶ್ರೇಯಸ್ ಅವರು ಬೆನ್ನು ಸೆಳೆತದಿಂದ ಬಳಲುತ್ತಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ತಿಳಿಸಿದ್ದರು. ಹೀಗಾಗಿ ಇವರನ್ನು ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಕೂಡ ಹೊರಗುಳಿದರು. ಆದರೆ, ಅಯ್ಯರ್ಗೆ ಯಾವುದೇ ತೊಂದರೆ ಇಲ್ಲ ಎಂದು NCA ಕ್ರೀಡಾ ವಿಜ್ಞಾನದ ಮುಖ್ಯಸ್ಥ ನಿತಿನ್ ಪಟೇಲ್ ಹೇಳಿದ್ದರು. ಬಳಿಕ ತಮಿಳುನಾಡು ವಿರುದ್ಧದ ಸೆಮಿಫೈನಲ್‌ಗೆ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಆದರೆ, ಅಯ್ಯರ್ ರಣಜಿಯಲ್ಲಿ ಆಡದೆ ಐಪಿಎಲ್ ಜಾಹೀರಾತು ಶೂಟಿಂಗ್ನಲ್ಲಿ ಕಾಣಿಸಿಕೊಂಡಿದ್ದರು.
ಟೀಂ ಇಂಡಿಯಾದಲ್ಲಿ ಮಾಜಿ ನಾಯಕ ಅಜಿಂಕ್ಯ ರಹಾನೆ ಯುಗಾಂತ್ಯ..?
ಏತನ್ಮಧ್ಯೆ, ಇಶಾನ್ ಕಿಶನ್‌ಗೆ ಕೋಚ್ ರಾಹುಲ್ ದ್ರಾವಿಡ್ ಅವರು ರೆಡ್ ಬಾಲ್ ಕ್ರಿಕೆಟ್ ಆಡಲು ಸಲಹೆ ನೀಡಿದ್ದರು. ಆದರೆ ಅವರು ಐಪಿಎಲ್‌ಗೆ ಸಿದ್ಧರಾಗಲು ನಿರ್ಧರಿಸಿದ್ದಾರೆ. ಕಿಶನ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದರು ಮತ್ತು ಇಂಗ್ಲೆಂಡ್ ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಲಿಲ್ಲ. ದ್ರಾವಿಡ್ ಮಾತನ್ನು ಕೂಡ ಕಿಶನ್ ನಿರಾಕರಿಸಿದರು. ಪಾಂಡ್ಯ ಸಹೋದರರೊಂದಿಗೆ ಬರೋಡಾದಲ್ಲಿ ಐಪಿಎಲ್‌ಗೆ ಅಭ್ಯಾಸ ಮಾಡುತ್ತಿರುವುದು ಕಂಡಿಬಂತು. ಹೀಗಾಗಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ ಎಂದು ಬಿಸಿಸಿಐ ತನ್ನ ಬಿಡುಗಡೆಯಲ್ಲಿ ದೃಢಪಡಿಸಿದೆ.
ಇದರ ಬೆನ್ನಲ್ಲೇ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕುರಿತು ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಇಶಾನ್ ಮತ್ತು ಅಯ್ಯರ್ ಈಗ 2024 ರ ಟಿ 20 ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಇವರನ್ನು ಮಹತ್ವದ ಐಸಿಸಿ ಈವೆಂಟ್ನಿಂದ ಕೈಬಿಡುವ ಸಾಧ್ಯತೆಗಳಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇಶಾನ್ ಕಳೆದ ವರ್ಷ ಸಿ ಗ್ರೇಡ್‌ನ ಭಾಗವಾಗಿದ್ದರು. ಶ್ರೇಯಸ್ ಗೆ ಬಿಸಿಸಿಐ ಗ್ರೇಡ್ ಬಿ ಗುತ್ತಿಗೆ ನೀಡಿತ್ತು.
ಕೇಂದ್ರೀಯ ಒಪ್ಪಂದದಿಂದ ಕೈಬಿಡಲಾಗಿದ್ದರೂ, ಆಟಗಾರರು ಭಾರತಕ್ಕಾಗಿ ಆಡಲು ಲಭ್ಯವಿರುತ್ತಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆಯು ಪ್ರದರ್ಶನ ಮತ್ತು ಫಿಟ್ನೆಸ್ ಅನ್ನು ಆಧರಿಸಿದೆ. ಬಿಸಿಸಿಐನ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿರುವವರಿಗೆ ಸೀಮಿತವಾಗಿಲ್ಲ. ಏತನ್ಮಧ್ಯೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಜೊತೆಗೆ ಚೇತೇಶ್ವರ ಪೂಜಾರ, ಯುಜ್ವೇಂದ್ರ ಚಾಹಲ್, ಉಮೇಶ್ ಯಾದವ್, ಶಿಖರ್ ಧವನ್ ಮತ್ತು ದೀಪಕ್ ಹೂಡಾ ಕೂಡ ಕೇಂದ್ರ ಒಪ್ಪಂದದಿಂದ ವಂಚಿತರಾಗಿದ್ದಾರೆ.
ಸರ್ವಶ್ರೇಷ್ಠ ದಾಖಲೆ ಬರೆಯುವ ಸನಿಹದಲ್ಲಿ ಯಶಸ್ವಿ ಜೈಸ್ವಾಲ್
ಕೇಂದ್ರೀಯ ಒಪ್ಪಂದಕ್ಕೆ ಸೇರಲು ಆಟಗಾರರು ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್ ಅಥವಾ 8 ಏಕದಿನ ಅಥವಾ 10 ಟಿ20I ಗಳನ್ನು ಆಡಬೇಕು. ಆಗ ಅಥ್ಲೀಟ್‌ಗಳನ್ನು ಸ್ವಯಂಚಾಲಿತವಾಗಿ ಅನುಪಾತದ ಆಧಾರದ ಮೇಲೆ ಗ್ರೇಡ್ ಸಿಗೆ ಸೇರಿಸಲಾಗುತ್ತದೆ ಎಂದು ಬಿಸಿಸಿಐ ದೃಢಪಡಿಸಿದೆ. ಇದುವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿರುವ ಧ್ರುವ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರು ಇಂಗ್ಲೆಂಡ್ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದರೆ ಗ್ರೇಡ್ ಸಿಗೆ ಸೇರ್ಪಡೆಯಾಗುತ್ತಾರೆ.
ಗ್ರೇಡ್ ಎ+ (4 ಕ್ರೀಡಾಪಟುಗಳು)
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ (6 ಕ್ರೀಡಾಪಟುಗಳು)
ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (5 ಕ್ರೀಡಾಪಟುಗಳು)
ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (15 ಕ್ರೀಡಾಪಟುಗಳು)
ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ