Yashasvi Jaiswal: ಸರ್ವಶ್ರೇಷ್ಠ ದಾಖಲೆ ಬರೆಯುವ ಸನಿಹದಲ್ಲಿ ಯಶಸ್ವಿ ಜೈಸ್ವಾಲ್
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಸರಣಿಯ ನಾಲ್ಕು ಪಂದ್ಯಗಳು ಮುಗಿದಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ಮೂರು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ಇದೀಗ ಈ ಸರಣಿಯ ಕೊನೆಯ ಪಂದ್ಯವು ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ.
ಯುವ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಟೀಮ್ ಇಂಡಿಯಾ ಪರ ಸರ್ವಶ್ರೇಷ್ಠ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ 120 ರನ್ ಬಾರಿಸಿದರೆ ಜೈಸ್ವಾಲ್ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ. ಅದು ಕೂಡ ಲೆಜೆಂಡ್ ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಶ್ರೇಷ್ಠ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಅಂದರೆ ಟೆಸ್ಟ್ ಸರಣಿವೊಂದರಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. 1970-71 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗವಾಸ್ಕರ್ 774 ರನ್ ಕಲೆಹಾಕಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಸರಣಿಯೊಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ನಿರ್ಮಿಸಿದ್ದರು.
ಇದೀಗ ಯಶಸ್ವಿ ಜೈಸ್ವಾಲ್ ಈ ದಾಖಲೆಯ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ 4 ಟೆಸ್ಟ್ ಪಂದ್ಯಗಳಲ್ಲಿ ಜೈಸ್ವಾಲ್ ಒಟ್ಟು 655 ರನ್ ಕಲೆಹಾಕಿದ್ದಾರೆ. ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ 120 ರನ್ ಬಾರಿಸಿದರೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.
ಕೊಹ್ಲಿ ದಾಖಲೆ ಉಡೀಸ್ ಖಚಿತ:
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿವೊಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್ನ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 2017 ರಲ್ಲಿ 8 ಇನಿಂಗ್ಸ್ಗಳಲ್ಲಿ 655 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಇದೀಗ ಈ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಸರಿಗಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 8 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಯಶಸ್ವಿ ಜೈಸ್ವಾಲ್ ಒಟ್ಟು 655 ರನ್ ಕಲೆಹಾಕಿದ್ದಾರೆ. ಈ ಮೂಲಕ 7 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಿರ್ಮಿಸಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 1 ರನ್ ಕಲೆಹಾಕಿದರೆ, ಆಂಗ್ಲರ ವಿರುದ್ಧ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಲಿದೆ.
ಹೀಗಾಗಿ ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಕಡೆಯಿಂದ ವಿಶೇಷ ದಾಖಲೆಯನ್ನು ನಿರೀಕ್ಷಿಸಬಹುದು. ಇದರ ಜೊತೆಗೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಶ್ರೇಷ್ಠ ದಾಖಲೆಯನ್ನು ಮುರಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2024: RCB ಗೆದ್ದರೆ ಹೊಸ ಇತಿಹಾಸ
ಡಾನ್ ಹೆಸರಿನಲ್ಲಿ ವಿಶ್ವ ದಾಖಲೆ:
ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಆಸ್ಟ್ರೇಲಿಯಾ ಡಾನ್ ಬ್ರಾಡ್ಮ್ಯಾನ್ ಹೆಸರಿನಲ್ಲಿದೆ. 1930 ರಲ್ಲಿ ಇಂಗ್ಲೆಂಡ್ ವಿರುದ್ದದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಡಾನ್ ಬ್ರಾಡ್ಮ್ಯಾನ್ 974 ರನ್ ಕಲೆಹಾಕಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವಿಶ್ವ ದಾಖಲೆಯನ್ನು ಮುರಿಯಲು ಯಶಸ್ವಿ ಜೈಸ್ವಾಲ್ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 320 ರನ್ ಕಲೆಹಾಕಬೇಕಿದೆ.