52 ವರ್ಷ, 1076 ಪಂದ್ಯಗಳ ಬಳಿಕ ಮೂಡಿಬಂದ ‘ಸ್ಫೋಟಕ ಟ್ವಿನ್ ಟನ್’..!

India vs Afghanistan: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ 402 ರನ್​ಗಳಿಸಿ ಆಲೌಟ್ ಆಯಿತು. ಈ ಕಠಿಣ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 44.3 ಓವರ್​ಗಳಲ್ಲಿ 232 ರನ್​ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ 170 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

52 ವರ್ಷ, 1076 ಪಂದ್ಯಗಳ ಬಳಿಕ ಮೂಡಿಬಂದ ಸ್ಫೋಟಕ ಟ್ವಿನ್ ಟನ್..!
Ishan Kishan - Subhman Gill
Image Credit source: x.com

Updated on: Jun 18, 2026 | 2:34 PM

ಭಾರತ ತಂಡವು ಜುಲೈ 13, 1974 ರಂದು ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಏಕದಿನ ಪಂದ್ಯವಾಡುವ ಮೂಲಕ ವೈಟ್ ಬಾಲ್ ಕ್ರಿಕೆಟ್ ಜಗತ್ತಿಗೆ ಹೆಜ್ಜೆ ಇಟ್ಟಿತ್ತು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ 52 ವರ್ಷಗಳ ಸುದೀರ್ಘ ಪಯಣದಲ್ಲಿ ಟೀಮ್ ಇಂಡಿಯಾ ಒಟ್ಟು 1,076 ಏಕದಿನ ಪಂದ್ಯಗಳನ್ನು ಆಡಿದೆ. ಆದರೆ, ಕಳೆದ ಬುಧವಾರ (ಜೂನ್ 17) ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಭಾರತ ತಂಡದ 1,077ನೇ ಏಕದಿನ ಪಂದ್ಯ ಇಡೀ ಕ್ರಿಕೆಟ್ ಜಗತ್ತೇ ತಿರುಗಿ ನೋಡುವಂತಹ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.

ಅರ್ಧ ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಭಾರತೀಯ ಏಕದಿನ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದ ಅದ್ಭುತ ದಾಖಲೆಯೊಂದನ್ನು ಇಬ್ಬರು ಯುವ ದಾಂಡಿಗರು ಒಂದೇ ಓವರ್‌ನಲ್ಲಿ ಸೃಷ್ಟಿಸಿದ್ದಾರೆ. ಹೌದು, ಭಾರತದ 1,077 ಪಂದ್ಯಗಳ ಸುದೀರ್ಘ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಭಾರತೀಯ ಬ್ಯಾಟರ್‌ಗಳು ಒಂದೇ ಪಂದ್ಯದಲ್ಲಿ, ಅದೂ ಸಹ ಕೇವಲ 80 ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಅಂದರೆ ಟೀಮ್ ಇಂಡಿಯಾ ಪರ ಈವರೆಗೆ ಏಕದಿನ ಪಂದ್ಯವೊಂದರಲ್ಲಿ ಇಬ್ಬರು ದಾಂಡಿಗರು 80 ಕ್ಕಿಂತ ಕಡಿಮೆ ಎಸೆತಗಳಲ್ಲಿ ಜೊತೆಯಾಗಿ ಶತಕ ಬಾರಿಸಿರಲಿಲ್ಲ. ಇದೀಗ ಅಫ್ಘಾನಿಸ್ತಾನ್ ವಿರುದ್ಧ ಅಬ್ಬರಿಸುವ ಮೂಲಕ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ‘ಸ್ಫೋಟಕ ಟ್ವಿನ್ ಟನ್’ ದಾಖಲೆ ನಿರ್ಮಿಸಿದ್ದಾರೆ.

  • ಇಶಾನ್ ಕಿಶನ್: ಕೇವಲ 71 ಎಸೆತಗಳಲ್ಲಿ ತಮ್ಮ ಬಿರುಸಿನ ಶತಕ ಪೂರೈಸಿದ ಕಿಶನ್, ಒಟ್ಟು 79 ಎಸೆತಗಳಲ್ಲಿ 125 ರನ್ ಚಚ್ಚಿದರು.
  • ಶುಭ್‌ಮನ್ ಗಿಲ್: ಅದ್ಭುತ ನಾಯಕತ್ವದ ಇನ್ನಿಂಗ್ಸ್ ಆಡಿದ ಗಿಲ್, 77 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಅಲಲ್ದೆ ಒಟ್ಟು 110 ಎಸೆತಗಳಲ್ಲಿ 154 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು.

ವಿಶೇಷವೆಂದರೆ, ಬಿಲಾಲ್ ಸಾಮಿ ಎಸೆದ ಪಂದ್ಯದ 33ನೇ ಓವರ್‌ನಲ್ಲಿ ಇವರಿಬ್ಬರೂ ತಮ್ಮ ಶತಕದ ಮೈಲಿಗಲ್ಲನ್ನು ತಲುಪಿದ್ದರು. ಈ ಮೂಲಕ ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಇಬ್ಬರು ದಾಂಡಿಗರು 80 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆ ಬರೆದರು.

ದಾಖಲೆಗಳ ಮೇಲೆ ಕಣ್ಣೋಟ:

  •  8ನೇ ಬಾರಿ: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಇನ್ನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟರ್‌ಗಳು 80ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಗಳಿಸಿದ್ದು ಕೇವಲ 8 ಬಾರಿ ಮಾತ್ರ. ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್.
  • 224 ರನ್‌ಗಳ ಜೊತೆಯಾಟ: ಮೂರನೇ ವಿಕೆಟ್‌ಗೆ ಜೊತೆಯಾದ ಈ ಜೋಡಿ ಕೇವಲ 140 ಎಸೆತಗಳಲ್ಲಿ 224 ರನ್‌ಗಳ ಸ್ಫೋಟಕ ಜೊತೆಯಾಟವಾಡಿದ್ದರು.
  •  400 ರನ್​ಗಳ ವಿಶ್ವ ದಾಖಲೆ: ಗಿಲ್ ಹಾಗೂ ಇಶಾನ್​ ಬಾರಿಸಿದ ಶತಕದ ನೆರವಿನಿಂದ ಭಾರತ 49.5 ಓವರ್‌ಗಳಲ್ಲಿ 402 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೂಲಕ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ (8 ಬಾರಿ) 400ಕ್ಕೂ ಅಧಿಕ ರನ್ ಗಳಿಸಿದ ಸೌತ್ ಆಫ್ರಿಕಾದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ.

ಇದನ್ನೂ ಓದಿ: IPL 2027: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್​!

ಒಟ್ಟಿನಲ್ಲಿ ಕಳೆದ 52 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತೀಯ ಕ್ರಿಕೆಟ್ ಕಂಡ ನೂರಾರು ದಿಗ್ಗಜ ಬ್ಯಾಟರ್‌ಗಳಿಗೂ ಸಾಧ್ಯವಾಗದ ಅಪರೂಪದ ದಾಖಲೆಯನ್ನು ಇಶಾನ್ ಕಿಶನ್ ಮತ್ತು ಶುಭ್‌ಮನ್ ಗಿಲ್ ಎಂಬ ಇಬ್ಬರು ಯುವ ರನ್ ಮಷೀನ್‌ಗಳು ಒಂದೇ ಪಂದ್ಯದಲ್ಲಿ ಬರೆದು ಮುಗಿಸಿದ್ದಾರೆ. ಈ ದಾಖಲೆಯೊಂದಿಗೆ ಟೀಮ್ ಇಂಡಿಯಾದ 1,077ನೇ ಪಂದ್ಯವು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲಾಗದ ಒಂದು ಸುವರ್ಣ ಅಧ್ಯಾಯವಾಗಿ ಇತಿಹಾಸದ ಪುಟ ಸೇರಿದೆ.

 

Follow Us