IPL 2027: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್!
IPL 2027: ಭಾರತದಲ್ಲಿ ಮೇ ತಿಂಗಳಿನಲ್ಲಿ ಕಂಡುಬರುವ ತೀವ್ರ ಬೇಸಿಗೆಯ ಬಿಸಿಲು ಮತ್ತು ಮುಂಗಾರು ಮಳೆಯ ಮುನ್ಸೂಚನೆಯಿಂದ ಆಟಗಾರರು ಹಾಗೂ ಕ್ರೀಡಾ ಪ್ರೇಕ್ಷಕರನ್ನು ರಕ್ಷಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಪಿಎಲ್ ಟೂರ್ನಿಯನ್ನು ಎಂದಿಗಿಂತಲೂ ಎರಡು ವಾರ ಮುಂಚಿತವಾಗಿ ಆರಂಭಿಸಲು ನಿರ್ಧರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ಆರಂಭಕ್ಕೆ ತಾತ್ಕಾಲಿಕ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಐಪಿಎಲ್ 2027 ಮಾರ್ಚ್ 10 ರಿಂದ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವನ್ನು ಮೇ 15 ರೊಳಗೆ ಮುಗಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಹಾಗೂ ಆಟಗಾರರ ಹಿತದೃಷ್ಟಿಯಿಂದ ಪ್ರಸ್ತುತ ಇರುವ 74 ಪಂದ್ಯಗಳ ಸ್ವರೂಪದಲ್ಲೇ 2027ರ ಐಪಿಎಲ್ ಟೂರ್ನಿ ಮುಂದುವರಿಯಲಿದೆ. ಇದರೊಂದಿಗೆ, ಭಾರತದ ತೀವ್ರ ಹವಾಮಾನ ವೈಪರೀತ್ಯ ಹಾಗೂ ಮುಂಗಾರು ಮಳೆಯಿಂದ ಪ್ಲೇ-ಆಫ್ ಪಂದ್ಯಗಳನ್ನು ರಕ್ಷಿಸಲು ಇನ್ಮುಂದೆ ಮಾರ್ಚ್ 10 ರಿಂದಲೇ ಐಪಿಎಲ್ ಆರಂಭಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ರೂಪಿಸಲಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆ 94ಕ್ಕೆ ಹೆಚ್ಚಾಗಬಹುದು ಎಂಬ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತೆರೆ ಎಳೆದಿದ್ದಾರೆ. ಅಂದರೆ ಐಪಿಎಲ್ 2027 ರಲ್ಲೂ 70 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಮ್ಯಾಚ್ಗಳೇ ನಡೆಯಲಿದೆ.
74 ಪಂದ್ಯಗಳಿಗಷ್ಟೇ ಮಿತಿ ಏಕೆ?
ಐಪಿಎಲ್ ಟೂರ್ನಿಯನ್ನು ವಿಸ್ತರಿಸಲು ಕ್ರಿಕೆಟ್ ಮಂಡಳಿ ಹಿಂದೇಟು ಹಾಕಲು ಪ್ರಮುಖ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ. ವಿಶ್ವದ ಇತರ ಕ್ರಿಕೆಟ್ ಮಂಡಳಿಗಳು ತಮ್ಮದೇ ಆದ ದ್ವಿಪಕ್ಷೀಯ ಸರಣಿಗಳನ್ನು ಮೊದಲೇ ನಿಗದಿಪಡಿಸಿವೆ. ಹೀಗಾಗಿ ವಿದೇಶಿ ಆಟಗಾರರು 2 ತಿಂಗಳಿಗಿಂತ ಹೆಚ್ಚು ಕಾಲ ಲಭ್ಯವಿರುವುದು ಕಷ್ಟಸಾಧ್ಯ.
ಹಾಗೆಯೇ ಪಂದ್ಯಗಳ ಸಂಖ್ಯೆ ಹೆಚ್ಚಾದರೆ ಆಟಗಾರರ ಮೇಲಿನ ದೈಹಿಕ ಒತ್ತಡ ಹೆಚ್ಚಾಗಲಿದ್ದು, ಇದು ಐಸಿಸಿ ಟೂರ್ನಿಗಳ ಮೇಲೆಯೂ ಪರಿಣಾಮ ಬೀರಬಹುದು.
ಹೊಸ ಐಪಿಎಲ್ ವಿಂಡೋ!
ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಿ ಮೇ ಅಂತ್ಯದವರೆಗೆ ನಡೆಯುತ್ತಿದ್ದ ಐಪಿಎಲ್ ಅನ್ನು ಇನ್ಮುಂದೆ ಮಾರ್ಚ್ 10 ಕ್ಕೆ ಆರಂಭಿಸಿ, ಮೇ 15 ರೊಳಗೆ ಮುಗಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಮಹತ್ವದ ನಿರ್ಧಾರದ ಹಿಂದಿರುವ ಕಾರಣಗಳೆಂದರೆ…
- ಬಿಸಿಲಿನ ಬೇಗೆಯಿಂದ ಮುಕ್ತಿ: ಮೇ ತಿಂಗಳ ದ್ವಿತೀಯಾರ್ಧದಲ್ಲಿ ಭಾರತದಾದ್ಯಂತ ತಾಪಮಾನ ತೀವ್ರವಾಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿಯ ಪಂದ್ಯಗಳಲ್ಲಿ ಆಟಗಾರರು ಹಾಗೂ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ತೀವ್ರ ಸೆಕೆಯಿಂದ ಬಳಲುತ್ತಿದ್ದರು. ಮಾರ್ಚ್‌ನಲ್ಲೇ ಟೂರ್ನಿ ಆರಂಭಿಸುವುದರಿಂದ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ.
- ಮುಂಗಾರು ಮಳೆಯಿಂದ ರಕ್ಷಣೆ: ಮೇ ತಿಂಗಳ ಕೊನೆಯ ವಾರದಲ್ಲಿ ಭಾರತದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗುತ್ತದೆ. ಇದರಿಂದ ಪ್ಲೇ-ಆಫ್ಸ್ ಮತ್ತು ಫೈನಲ್‌ನಂತಹ ಪ್ರಮುಖ ಪಂದ್ಯಗಳು ರದ್ದಾಗುವ ಭೀತಿ ಇರುತ್ತಿತ್ತು. ಮೇ 15ರ ಒಳಗಾಗಿ ಟೂರ್ನಿ ಮುಗಿಸಿದರೆ ಮಳೆಯ ಅಡ್ಡಿಯಿಲ್ಲದೆ ಸುಸೂತ್ರವಾಗಿ ಫೈನಲ್ ಪಂದ್ಯ ನಡೆಸಬಹುದು.
ದೇಶಿ ಕ್ರಿಕೆಟ್‌ಗೂ ಹೊಸ ರೂಪ:
ಐಪಿಎಲ್ ಅನ್ನು ಮಾರ್ಚ್ 10 ರಂದೇ ಆರಂಭಿಸಬೇಕಿರುವುದರಿಂದ ಭಾರತದ ದೇಶಿ ಕ್ರಿಕೆಟ್ ವೇಳಾಪಟ್ಟಿಯನ್ನೂ ಸಂಪೂರ್ಣವಾಗಿ ಬದಲಾಯಿಸಲು ಬಿಸಿಸಿಐ ನಿರ್ಧರಿಸಿದೆ. ರಣಜಿ ಟ್ರೋಫಿ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ದೇಶಿ ಟೂರ್ನಿಗಳನ್ನು ಮಾರ್ಚ್ ಆರಂಭದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಹಾದಿಗೆ ಹಾಕಬೇಕಿದೆ ‘ಮಾನಸಿಕ’ ಬೇಲಿ!
ಒಟ್ಟಾರೆಯಾಗಿ, ವಾಣಿಜ್ಯ ಲಾಭಕ್ಕಿಂತ ಆಟಗಾರರ ಫಿಟ್‌ನೆಸ್, ಹವಾಮಾನದ ಅನುಕೂಲ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮಗಳಿಗೆ ಬಿಸಿಸಿಐ ಹೆಚ್ಚಿನ ಆದ್ಯತೆ ನೀಡಿದೆ ಎಂಬುದು ಈ ನಿರ್ಧಾರದಿಂದ ಸ್ಪಷ್ಟವಾಗಿದೆ.




