ವೈಭವ್ ಸೂರ್ಯವಂಶಿ ಹಾದಿಗೆ ಹಾಕಬೇಕಿದೆ ‘ಮಾನಸಿಕ’ ಬೇಲಿ!
ಆಧುನಿಕ ಕ್ರಿಕೆಟ್ ಕೇವಲ ರನ್ ಮತ್ತು ವಿಕೆಟ್‌ಗಳ ಆಟವಾಗಿ ಉಳಿದಿಲ್ಲ; ಅದು ಈಗ ಮೈದಾನದೊಳಗಿನ ಬಿರುಸಿನ ಮಾತುಗಳು ಮತ್ತು ತೀಕ್ಷ್ಣ ನೋಟಗಳ ಕಣಜವಾಗಿದೆ. ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಯುವ ಪೀಳಿಗೆಯಲ್ಲಿ ಎದ್ದು ಕಾಣುತ್ತಿರುವುದು ಇದೇ ಆಕ್ರಮಣಕಾರಿ ಮನೋಭಾವ. ಹಿಂದೆ ದೇಶಿ ಕ್ರಿಕೆಟ್ ಅಥವಾ ಐಪಿಎಲ್‌ನಂತಹ ವಾಣಿಜ್ಯ ವೇದಿಕೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ಆಕ್ರೋಶದ ಕಿಡಿ, ಈಗ ದೇಶವನ್ನು ಪ್ರತಿನಿಧಿಸುವ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಜ್ವಾಲೆಯಾಗಿ ಉರಿಯುತ್ತಿದೆ. ಈ ಬದಲಾಗುತ್ತಿರುವ ಕ್ರಿಕೆಟ್ ಸಂಸ್ಕೃತಿಯನ್ನು ಬಿಸಿಸಿಐ ಹೇಗೆ ನಿಭಾಯಿಸಬೇಕು? ಎಂಬುದರ ವಿಶ್ಲೇಷಣಾ ವರದಿ ಇಲ್ಲಿದೆ.

ಭಾರತೀಯ ಕ್ರಿಕೆಟ್‌ನ ಹೊಸ ಆಶಾಕಿರಣ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇತ್ತೀಚೆಗೆ ಶ್ರೀಲಂಕಾ ‘ಎ’ ತಂಡದ ವಿರುದ್ಧದ ಪಂದ್ಯದಲ್ಲಿ ದೈಹಿಕ ಜಗಳಕ್ಕೆ ಇಳಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೂಪರ್ ಓವರ್‌ನ ರೋಮಾಂಚಕ ಕ್ಷಣಗಳಲ್ಲಿ ಶ್ರೀಲಂಕಾ ಆಟಗಾರರು “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಕೆಣಕಿದಾಗ, ತಾಳ್ಮೆ ಕಳೆದುಕೊಂಡ ವೈಭವ್ ಎದುರಾಳಿ ಆಟಗಾರ ವಿಶೇನ್ ಹಲಂಬಾಗೆ ಜೊತೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.
ಬಿಸಿಸಿಐ ಸದ್ಯಕ್ಕೆ ಈ ಯುವ ಆಟಗಾರನಿಗೆ ಯಾವುದೇ ಕಠಿಣ ಶಿಕ್ಷೆ ವಿಧಿಸದೆ, ಅವರ ಗಮನ ಕ್ರಿಕೆಟ್‌ನಿಂದ ಬೇರೆಡೆಗೆ ಹರಿಯದಂತೆ ನೋಡಿಕೊಳ್ಳಲು ನಿರ್ಧರಿಸಿದೆ. ಆದರೆ, ಸಂಜಯ್ ಮಂಜ್ರೇಕರ್ ಅವರಂತಹ ಹಿರಿಯ ಕ್ರಿಕೆಟಿಗರು ಎಚ್ಚರಿಸಿರುವಂತೆ, ವೈಭವ್ ಅವರ ಈ ಆಕ್ರಮಣಕಾರಿ ಸ್ವಭಾವ ಮುಂದಿನ ದಿನಗಳಲ್ಲಿ ಅವರ ವೃತ್ತಿಜೀವನಕ್ಕೆ ಮುಳ್ಳಾಗಬಹುದು. ಹಾಗಾದರೆ, ಈ ಯುವ ಪ್ರತಿಭೆಯನ್ನು ಸೂಕ್ತ ಹಾದಿಗೆ ತರಲು ಬಿಸಿಸಿಐ ಏನು ಮಾಡಬಹುದು? ಇಲ್ಲಿದೆ ಒಂದು ವಿಶ್ಲೇಷಣೆ.
ಬಿಸಿಸಿಐ ತೆಗೆದುಕೊಳ್ಳಬೇಕಾದ ಪ್ರಮುಖ ಕ್ರಮಗಳು:
ಕ್ರಿಕೆಟ್ ತಜ್ಞರು ಮತ್ತು ಕ್ರೀಡಾ ಮನಶ್ಶಾಸ್ತ್ರಜ್ಞರ ಪ್ರಕಾರ, ವೈಭವ್ ಸೂರ್ಯವಂಶಿ ಅವರಲ್ಲಿ ಕೌಶಲ್ಯದ ಕೊರತೆಯಿಲ್ಲ, ಬದಲಿಗೆ “ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯದ” ಕೊರತೆಯಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ತನ್ನ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.
ಮಾನಸಿಕ ತರಬೇತಿ ಮತ್ತು ಒತ್ತಡ ನಿರ್ವಹಣೆ: ವೈಭವ್ ಸೂರ್ಯವಂಶಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿದೆ. ಇದಕ್ಕಾಗಿ ವಿ.ವಿ.ಎಸ್. ಲಕ್ಷ್ಮಣ್ ನೇತೃತ್ವದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಯುವ ಆಟಗಾರರಿಗಾಗಿ ವಿಶೇಷ ಮಾನಸಿಕ ಪ್ರೊಫೈಲಿಂಗ್ ಶಿಬಿರಗಳನ್ನು ನಡೆಸಬೇಕು. ಈ ಮೂಲಕ ಯುವ ಕ್ರಿಕೆಟಿಗರಿಗೆ ಮಾನಸಿಕ ತರಬೇತಿ ನೀಡಿ, ಒತ್ತಡ ನಿರ್ವಹಿಸುವ ಕಲೆಯನ್ನು ಹೇಳಿಕೊಡಬೇಕಾದ ಅನಿವಾರ್ಯತೆ ಇದೆ.
ಕೃತಕ ಒತ್ತಡದ ಸನ್ನಿವೇಶಗಳ ಸೃಷ್ಟಿ: ಅಭ್ಯಾಸ ಪಂದ್ಯಗಳ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕೆಣಕುವ ಅಥವಾ ಸ್ಲೆಡ್ಜಿಂಗ್ ಮಾಡುವ ಸನ್ನಿವೇಶಗಳನ್ನು ಸೃಷ್ಟಿಸಿ, ವೈಭವ್ ತಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತಾರೆ ಎಂಬುದನ್ನು ಪರೀಕ್ಷಿಸಬೇಕು.
ಮೈಂಡ್ ರೀಸೆಟ್ ತಂತ್ರಗಳು: ಹಿರಿಯ ಮನಶ್ಶಾಸ್ತ್ರಜ್ಞರ ಪ್ರಕಾರ, ಪಂದ್ಯದ ಅತ್ಯಂತ ಕಠಿಣ ಕ್ಷಣಗಳಲ್ಲಿ ಮನಸ್ಸನ್ನು ಶಾಂತವಾಗಿಡಲು ಆಳವಾದ ಉಸಿರಾಟ ಅಥವಾ ನಿರ್ದಿಷ್ಟ ದೈಹಿಕ ತಂತ್ರಗಳನ್ನು ವೈಭವ್‌ಗೆ ಕಲಿಸಿಕೊಡುವುದು ಅತ್ಯಗತ್ಯ.
ಹಿರಿಯ ಕ್ರಿಕೆಟಿಗರ ಮಾರ್ಗದರ್ಶನ: 1992ರಲ್ಲಿ 19 ವರ್ಷದ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದಲ್ಲಿ ತಮಗೆ ಸ್ಲೆಡ್ಜಿಂಗ್ ಮಾಡಿದ ಬೌಲರ್‌ಗೆ ಕೇವಲ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದರು. ಇಂತಹ ಹಿರಿಯ ಕ್ರಿಕೆಟಿಗರನ್ನು ವೈಭವ್ ಸೂರ್ಯವಂಶಿ ಮೆಂಟರ್‌ಗಳಾಗಿ ಪರಿಗಣಿಸಬೇಕು. ಅಲ್ಲದೆ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವುದು ಕೂಡ ಉತ್ತಮ.
ಹಾಲಿ ಕೋಚ್‌ಗಳ ಬೆಂಬಲ: ಇಂಡಿಯಾ ‘ಎ’ ತಂಡದ ಸ್ಪಿನ್ ಕೋಚ್ ಸಾಯಿರಾಜ್ ಬಹುತುಳೆ ಅವರಂತಹ ಹಿರಿಯರು, ರಾಜಸ್ಥಾನ್ ರಾಯಲ್ಸ್ ದಿನಗಳಿಂದಲೂ ವೈಭವ್ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಅವರು ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ವೈಭವ್‌ಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.
ನಿಯಮಗಳ ಬಗ್ಗೆ ಕಠಿಣ ಅರಿವು:
ವೈಭವ್ ಸೂರ್ಯವಂಶಿಯ ವಯಸ್ಸು ಕೇವಲ 15 ವರ್ಷ. ತನ್ನ ಬಾಲ್ಯದಲ್ಲಿ ಹೆಚ್ಚಿನ ಸಮಯವನ್ನು ಮೈದಾನದಲ್ಲೇ ಕಳೆದಿದ್ದಾರೆ. ಇದಾಗ್ಯೂ ಅವರಿಗೆ ಐಸಿಸಿ ನಿಯಮಗಳ ಬಗ್ಗೆ ಸಂಪೂರ್ಣ ಅರಿವು ಇರುವ ಸಾಧ್ಯತೆಗಳಿಲ್ಲ. ಹೀಗಾಗಿ ಕೋಚ್ ಹಾಗೂ ಇತರೆ ಸಿಬ್ಬಂದಿಗಳು ಕಠಿಣ ನಿಯಮಗಳ ಬಗ್ಗೆ ವೈಭವ್ ಸೂರ್ಯವಂಶಿಗೆ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ.
- ಐಸಿಸಿ ನಿಯಮಗಳ ಪ್ರಕಾರ ಮೈದಾನದಲ್ಲಿ ದೈಹಿಕ ಸಂಪರ್ಕ ಅಥವಾ ತಳ್ಳಾಟಕ್ಕೆ ಕಠಿಣ ನಿಷೇಧವಿದೆ.
- ಇಂತಹ ವರ್ತನೆಗಳು ಕೇವಲ ವೈಯಕ್ತಿಕ ರೇಟಿಂಗ್ ಮಾತ್ರವಲ್ಲದೆ, ಇಡೀ ತಂಡಕ್ಕೆ ಪೆನಾಲ್ಟಿ ಅಥವಾ ಮ್ಯಾಚ್ ಬ್ಯಾನ್ ರೂಪದಲ್ಲಿ ಹೊಡೆತ ನೀಡಬಹುದು.
- ವೈಭವ್ ಸೂರ್ಯವಂಶಿಗೆ ಇಂತಹ ಕಠಿಣ ನಿಯಮಗಳ ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಬೇಕು.
ಇದನ್ನೂ ಓದಿ: ಕಣ್ಣಿಗೆ ಸನ್ಗ್ಲಾಸ್… ಆರ್ಚರ್ ಎದುರು ಫಿಲಿಪ್ಸ್ ಮಾಸ್!
ವೈಭವ್ ಸೂರ್ಯವಂಶಿ ಅವರಲ್ಲಿ ಅದ್ಭುತ ಬ್ಯಾಟಿಂಗ್ ಪ್ರತಿಭೆಯಿದೆ ಎಂಬುದು ನಿಜ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಲು ಕೇವಲ ರನ್ ಗಳಿಸಿದರೆ ಸಾಲದು, ಎದುರಾಳಿಗಳ ಮಾನಸಿಕ ದಾಳಿಯನ್ನು ನಗುಮೊಗದಿಂದಲೇ ಎದುರಿಸಿ ಬ್ಯಾಟ್ ಮೂಲಕವೇ ಉತ್ತರಿಸುವ ‘ಚಾಣಾಕ್ಷತೆ’ ಬೇಕು. ಬಿಸಿಸಿಐ ಈಗಿನಿಂದಲೇ ಇವರನ್ನು ಸರಿಯಾದ ಹಾದಿಗೆ ತಂದರೆ, ಭಾರತಕ್ಕೆ ಮತ್ತೊಬ್ಬ ಶ್ರೇಷ್ಠ ಆಟಗಾರ ಸಿಗುವುದರಲ್ಲಿ ಸಂಶಯವಿಲ್ಲ.




