AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿಗೆ ಸನ್​ಗ್ಲಾಸ್... ಆರ್ಚರ್ ಎದುರು ಫಿಲಿಪ್ಸ್ ಮಾಸ್!

ಕಣ್ಣಿಗೆ ಸನ್​ಗ್ಲಾಸ್… ಆರ್ಚರ್ ಎದುರು ಫಿಲಿಪ್ಸ್ ಮಾಸ್!

TV9 Web
| Edited By: |

Updated on: Jun 18, 2026 | 10:06 AM

Share

England vs New zealand: ಸನ್​ಗ್ಲಾಸ್ ಧರಿಸಿಯೇ ಏಕಾಂಗಿ ಹೋರಾಟ ಮುಂದುವರೆಸಿರುವ ಗ್ಲೆನ್ ಫಿಲಿಪ್ಸ್ ಮೊದಲ ದಿನದಾಟದ ಅಂತ್ಯಕ್ಕೆ 74 ಎಸೆತಗಳಲ್ಲಿ 9 ಫೋರ್​ ಬಾರಿಸಿ ಅಜೇಯ 49 ರನ್ ಕಲೆಹಾಕಿದ್ದಾರೆ. ಇತ್ತ ಫಿಲಿಪ್ಸ್ ಅವರ ಈ ಕೆಚ್ಚೆದೆಯ ಪ್ರದರ್ಶನದ ಫಲವಾಗಿ ನ್ಯೂಝಿಲೆಂಡ್ ತಂಡವು ಮೊದಲ ದಿನದಲ್ಲೇ ಆಲೌಟ್ ಆಗುವುದರಿಂದ ಬಚಾವಾಗಿದೆ. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್​ನಲ್ಲಿ 7 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದೆ.

ಲಂಡನ್‌ನ ಓವಲ್ ಮೈದಾನದಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ಜೋಫ್ರಾ ಆರ್ಚರ್ ನಡುವೆ ನಡೆದ ರೋಚಕ ಹಣಾಹಣಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನ್ಯೂಝಿಲೆಂಡ್ ತಂಡದ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಿ, ಇಂಗ್ಲೆಂಡ್‌ನ ಅತ್ಯಂತ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಬೌನ್ಸರ್‌ಗಳನ್ನು ಎದುರಿಸಿದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸನ್​ಗ್ಲಾಸ್ ಧರಿಸಲು ಕಾರಣವೇನು?

ಪಂದ್ಯದ 67ನೇ ಓವರ್​ ವೇಳೆ ಓವಲ್ ಮೈದಾನದ ಸೈಟ್‌ಸ್ಕ್ರೀನ್‌ನಿಂದ ಸೂರ್ಯನ ಬೆಳಕು ತೀವ್ರವಾಗಿ ಕಣ್ಣಿಗೆ ಬಡಿಯುತ್ತಿದ್ದ ಕಾರಣ, ಚೆಂಡನ್ನು ಸ್ಪಷ್ಟವಾಗಿ ಗುರುತಿಸಲು ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಲು ನಿರ್ಧರಿಸಿದರು.

ಫಿಲಿಪ್ಸ್ ಹೆಲ್ಮೆಟ್ ಒಳಗಡೆ ದೊಡ್ಡ ಕನ್ನಡಕ ಧರಿಸಿ ಕ್ರೀಸ್‌ನಲ್ಲಿ ನಿಂತಾಗ, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಲೇವಡಿ ಮಾಡಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇದನ್ನು ಫಿಲಿಪ್ಸ್ ಅವರ ಅಪ್ರತಿಮ “ಸ್ವಾಗ್” ಮತ್ತು ಧೈರ್ಯ ಎಂದು ಬಣ್ಣಿಸಿದ್ದಾರೆ.

ಜೋಫ್ರಾ ಆರ್ಚರ್ vs ಗ್ಲೆನ್ ಫಿಲಿಪ್ಸ್:

ವೇಗವಾಗಿ ರನ್ ಗಳಿಸುತ್ತಿದ್ದ ಗ್ಲೆನ್ ಫಿಲಿಪ್ಸ್ (23 ಎಸೆತಗಳಲ್ಲಿ 33 ರನ್) ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ನಾಯಕ ಜೋ ರೂಟ್, ಜೋಫ್ರಾ ಆರ್ಚರ್ ಅವರನ್ನು ಮರಳಿ ಬೌಲಿಂಗ್‌ಗೆ ತಂದರು. ಆರ್ಚರ್ ಸನ್‌ಗ್ಲಾಸ್ ಧರಿಸಿದ್ದ ಫಿಲಿಪ್ಸ್ ವಿರುದ್ಧ ಸತತ 8 ಓವರ್‌ಗಳ ಕಾಲ ಕೇವಲ ಶಾರ್ಟ್-ಪಿಚ್ ಎಸೆತಗಳ ಮೂಲಕ ದಾಳಿ ನಡೆಸಿದರು. ಫಿಲಿಪ್ಸ್ ಸನ್‌ಗ್ಲಾಸ್ ಧರಿಸಿದ ತಕ್ಷಣ ಎದುರಿಸಿದ ಆರ್ಚರ್ ಅವರ ಮೊದಲ ಬೌನ್ಸರ್ ನೇರವಾಗಿ ಅವರ ಹೆಗಲಿಗೆ ಬಡಿಯಿತು.

ಚಹಾ ವಿರಾಮದ ನಂತರ ಆರ್ಚರ್ ಎಸೆದ 40 ಎಸೆತಗಳಲ್ಲಿ 33 ಎಸೆತಗಳು ಶಾರ್ಟ್-ಪಿಚ್ ಆಗಿದ್ದವು. ಸುಮಾರು 138 ಕಿ.ಮೀ ವೇಗದಲ್ಲಿ ಬಂದ ಕುತ್ತಿಗೆ ಮಟ್ಟದ ಬೌನ್ಸರ್ ಒಂದರಿಂದ ತಪ್ಪಿಸಿಕೊಳ್ಳಲು ಫಿಲಿಪ್ಸ್ ಕ್ರೀಸ್‌ನಲ್ಲಿ ಮಲಗಬೇಕಾಯಿತು.

ಆರ್ಚರ್ ಎಸೆದ ಈ ಭೀಕರ ಬೌನ್ಸರ್‌ನಿಂದ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದ ಫಿಲಿಪ್ಸ್, ಹಾಗೆಯೇ ಮಲಗಿ ನ್ಯೂಝಿಲೆಂಡ್ ಡ್ರೆಸ್ಸಿಂಗ್ ರೂಮ್ ಕಡೆಗೆ ‘ಥಂಬ್ಸ್-ಅಪ್’ ತೋರಿಸಿದರು. ಇದನ್ನು ಕಂಡು ಸಹ ಆಟಗಾರ ಡೆರಿಲ್ ಮಿಚೆಲ್ ಸೇರಿದಂತೆ ಇಡೀ ಕಿವೀಸ್ ಬಳಗ ನಗೆಗಡಲಲ್ಲಿ ತೇಲಿದರು.

ಇದಾಗ್ಯೂ ಸನ್​ಗ್ಲಾಸ್ ಧರಿಸಿಯೇ ಏಕಾಂಗಿ ಹೋರಾಟ ಮುಂದುವರೆಸಿರುವ ಗ್ಲೆನ್ ಫಿಲಿಪ್ಸ್ ಮೊದಲ ದಿನದಾಟದ ಅಂತ್ಯಕ್ಕೆ 74 ಎಸೆತಗಳಲ್ಲಿ 9 ಫೋರ್​ ಬಾರಿಸಿ ಅಜೇಯ 49 ರನ್ ಕಲೆಹಾಕಿದ್ದಾರೆ. ಇತ್ತ ಫಿಲಿಪ್ಸ್ ಅವರ ಈ ಕೆಚ್ಚೆದೆಯ ಪ್ರದರ್ಶನದ ಫಲವಾಗಿ ನ್ಯೂಝಿಲೆಂಡ್ ತಂಡವು ಮೊದಲ ದಿನದಲ್ಲೇ ಆಲೌಟ್ ಆಗುವುದರಿಂದ ಬಚಾವಾಗಿದೆ. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್​ನಲ್ಲಿ 7 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದೆ.

 

 

Follow Us