ಜಮ್ಮು-ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ (Umran Malik) ಅವರನ್ನು ಈ ಬಾರಿಯ ಐಪಿಎಲ್‌ನ ಅತಿದೊಡ್ಡ ಅನ್ವೇಷಣೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದ ಉಮ್ರಾನ್ ಈ ಬಾರಿ ಹಲವು ದಾಖಲೆಗಳನ್ನು ಬರೆದಿದ್ದರು. ಅದರಲ್ಲೂ 157 ಕಿ.ಮೀ ವೇಗದಲ್ಲಿ ಚೆಂಡೆಸೆದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲ್ ಮಾಡಿದ ಭಾರತೀಯ ಎನಿಸಿಕೊಂಡರು. ಹೀಗೆ ಐಪಿಎಲ್ನುದ್ದಕ್ಕೂ ಉಮ್ರಾನ್ ತನ್ನ ಬೌಲಿಂಗ್ ವೇಗದಿಂದ ಅನೇಕ ಬ್ಯಾಟ್ಸ್‌ಮನ್‌ಗಳನ್ನು ಬೆರಗುಗೊಳಿಸಿದರು. ಇದೀಗ ಯುವ ವೇಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ನಲ್ಲಿ ವೃದ್ಧಿಮಾನ್ ಸಾಹ, ರೋಹಿತ್ ಶರ್ಮಾ, ಮ್ಯಾಥ್ಯೂ ವೇಡ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಉಮ್ರಾನ್ ತಮ್ಮ ವೇಗದಿಂದ ಇಕ್ಕಟ್ಟಿಗೆ ಸಿಲುಕಿಸಿದ್ದರು. ಅದರಲ್ಲೂ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಉಮ್ರಾನ್ ಅವರ ವೇಗ ಮತ್ತು ಬೌನ್ಸ್‌ನಿಂದ ತೊಂದರೆಗೀಡಾದ್ದರು. ಇದೀಗ 22ರ ಯುವ ವೇಗಿ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳಿಗೆ ಮಾರಕವಾಗವಾಗಲು ಸಿದ್ದರಾಗುತ್ತಿದ್ದಾರೆ.
ಈ ವೇಳೆ ಮಾತನಾಡಿದ ಉಮ್ರಾನ್ ಮಲಿಕ್, ನಾನು ಬೌಲಿಂಗ್ ಮಾಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣುಗಳಲ್ಲಿ ಕಾಣುವ ಭಯವನ್ನು ನೋಡುವುದನ್ನು ಆನಂದಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಹೆಚ್ಚು ವಿಕೆಟ್ ಸಿಕ್ಕಾಗ ಖುಷಿಯಾಗುತ್ತೆ. ಬ್ಯಾಟ್ಸ್‌ಮನ್ ಹೆದರಿದಾಗ, ನಾನು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ಇದರಿಂದ ಮತ್ತಷ್ಟು ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿದೆ ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.
ಉಮ್ರಾನ್ ಮಲಿಕ್ ಈ ಬಾರಿಯ ಐಪಿಎಲ್‌ನ 14 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನಕ್ಕೆ ಅವರು ಪಂದ್ಯ ಶ್ರೇಷ್ಠ ಪಡೆದಿದ್ದರು. ಹಾಗೆಯೇ ಅತ್ಯುತ್ತಮ ಬೌಲಿಂಗ್ ಕಾರಣ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಯ್ಕೆಗಾರರು ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಇನ್ನು ಉಮ್ರಾನ್ ಮಲಿಕ್ ಅವರ ಬೌಲಿಂಗ್ ಶೈಲಿ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಅವರನ್ನು ಹೋಲುತ್ತದೆ. ಈ ಬಗ್ಗೆ ಮಾತನಾಡಿರುವ ಮಲಿಕ್, ನಾನು ವಕಾರ್ ಯೂನಿಸ್ ಅವರ ಅಭಿಮಾನಿಯಲ್ಲ. ಅವರ ಶೈಲಿಯನ್ನೂ ಕೂಡ ಅನುಸರಿಸುವುದಿಲ್ಲ. ನನ್ನ ನೆಚ್ಚಿನ ಬೌಲರ್ಗಳೆಂದರೆ ಟೀಮ್ ಇಂಡಿಯಾದ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್. ನಾನು ಇವರನ್ನು ರೋಲ್ ಮಾಡೆಲ್ಗಳಾಗಿ ಪರಿಗಣಿಸಿದ್ದೇನೆ ಎಂದು ತಿಳಿಸಿದರು.
ಭಾರತ-ದಕ್ಷಿಣ ಆಫ್ರಿಕಾ ನಡುವೆ ಜೂ.9 ರಿಂದ ಟಿ20 ಸರಣಿ ಶುರುವಾಗಲಿದ್ದು, ಈ ಸರಣಿಗಾಗಿ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ ಉಮ್ರಾನ್ ಮಲಿಕ್ ಕೂಡ ಸ್ಥಾನ ಪಡೆದಿದ್ದಾರೆ. ಅಲ್ಲದೆ ಈ ಸರಣಿಯ ಮೂಲಕ ಟೀಮ್ ಇಂಡಿಯಾ ಪರ ಮಲಿಕ್ ಪದಾರ್ಪಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.
ಸೌತ್ ಆಫ್ರಿಕಾ ವಿರುದ್ದ ಸರಣಿಗೆ ಟೀಮ್ ಇಂಡಿಯಾ ಹೀಗಿದೆ:
ಟೀಮ್ ಇಂಡಿಯಾ ಟಿ20 ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ಟಿ20 ತಂಡ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ತಬ್ರೇಝ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಯಾನ್ಸೆನ್
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.